ಬಂಟ್ವಾಳ

ಬೊರಿಮಾರ್ ಚರ್ಚ್ ಗೆ ಆರ್ಚ್ ಬಿಷಪ್ ಭೇಟಿ, ಶತಮಾನೋತ್ತರ ಬೆಳ್ಳಿ ಹಬ್ಬ ಆಚರಣೆಗೆ ಶುಭ ಹಾರೈಕೆ

ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ  ಬೊರಿಮಾರ್ ಚರ್ಚ್ ನಲ್ಲಿ ನಡೆದ ಅವಿಸ್ಮರಣೀಯ ಕಾರ್ಯಕ್ರಮ ನನ್ನ ಬದುಕಿಗೂ ಹೊಸ ಪ್ರೇರಣೆ ನೀಡಿದೆ, ಇದರಲ್ಲಿ ಪಾಲ್ಗೊಂಡು ನಾನೂ ಸಂತೃಪ್ತನಾಗಿದ್ದೇನೆ,  ಸರ್ವಶಕ್ತನ ಅನುಗ್ರಹದೊಂದಿಗೆ ೧೨೫ನೇ ವರ್ಷದ ಎಲ್ಲಾ ಕಾರ್ಯಕ್ರಮಗಳೂ ಯಶಸ್ವಿಯಾಗಲಿ ಎಂದು ಕರ್ನಾಟಕದ ಆರ್ಚ್ ಬಿಷಪ್ ಅತೀ ವಂದನೀಯ ಡಾ| ಪೀಟರ್ ಮಚಾದೊ  ಹಾರೈಸಿದ್ದಾರೆ.

ಜಾಹೀರಾತು

ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಬೊರಿಮಾರ್ ಚರ್ಚ್‌ಗೆ ಸೋಮವಾರ ಭೇಟಿ ನೀಡಿದ ಅವರು,ದಿವ್ಯ ಬಲಿಪೂಜೆ ಹಾಗೂ ಕಮ್ಯುನಿಯನ್ ಡೇ ಎಂಬ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದ ಅಂಗವಾಗಿ ಪ್ರತೀ ತಿಂಗಳು ಮಾದರಿಯಾದ ಧಾರ್ಮಿಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವ ಚರ್ಚಿನ ಧರ್ಮಗುರು ಹಾಗೂ ಪಾಲನಾ ಮಂಡಳಿಯನ್ನು ಅಭಿನಂದಿಸಿದ ಅವರು, ಮುಂದೆಯೂ ಇಂತಹಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದರು.

ಮಕ್ಕಳಾದ ಐಶಲ್ ಮಾರ್ಟಿಸ್, ಲೆನೊರಾ ಸಾನ್ಸಿಯಾ ಪಿಂಟೊ, ನತಾಶ ಮೆಂಡೊನ್ಸಾ, ಒಲಿಶಾ ನೊರೊನ್ಹಾ, ರಿಯೋನ್ ಪಾವ್ಲ್ ಮಾರ್ಟಿಸ್ ಹಾಗೂ ಶರುನ್ ರೊಡ್ರಿಗಸ್  ಅವರಿಗೆ ಪ್ರಪ್ರಥಮ ಬಾರಿಗೆ ಪರಮ ಪ್ರಸಾದ ನೀಡಿ ಹರಸಿದ ಅವರು, ಉನ್ನತ ಆದರ್ಶಗಳೊಂದಿಗೆ ಜೀವನ ಸಾಗಿಸಲು ಕರೆ ನೀಡಿದರು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಡಾ. ಲಾರೆನ್ಸ್ ಮುಕ್ಕುಝಿ ಯವರು ಮಾತನಾಡಿ, ಆರ್ಚ್ ಬಿಷಪ್ ಭೇಟಿಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮನಸ್ಸು ತುಂಬಿ ಬಂದಿದೆ. ಇದೆಲ್ಲವೂ ದಯಾಮಯನಾದ ಸರ್ವಶಕ್ತನ ಪ್ರೇರಣೆಯಿಂದ ನಡೆದಿದೆ. ಪರಮಪ್ರಸಾದ ಸ್ವೀಕರಿಸಿದ ಮಕ್ಕಳ ಬದುಕು ಉಜ್ವಲವಾಗಲಿ ಎಂದು ಹಾರೈಸಿದರು.

ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಡಾ. ಗೀವರ್ಗೀಸ್ ಮಾರ್ ಮಕಾರಿಯೋಸ್ ಮಾತನಾಡಿ, ದೇವರ ಕಾರ್ಯದಲ್ಲಿ ಒಂದಾಗುವುದಕ್ಕೂ ಅವನ ಕೃಪೆ ಇರಬೇಕು, ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಚರ್ಚ್‌ನ ಈ ಕಾರ್ಯಕ್ರಮಗಳು ಇಡೀ ಸಮಾಜಕ್ಕೆ ಆದರ್ಶವನ್ನು ಹಂಚುತ್ತಿದೆ ಎಂದರು. ಪರಮಪ್ರಸಾದ ಸ್ವೀಕರಿಸಿದ ಮಕ್ಕಳಿಗೆ ಹಾಗೂ ಮಕ್ಕಳ ಹೆತ್ತವರಿಗೆ ಪಕ್ಷಿಕೆರೆ ಚರ್ಚಿನ ಧರ್ಮಗುರು ವಂದನೀಯ ಫಾ.ಮೆಲ್ವಿನ್ ನೊರೋನ್ಹಾ ರವರು ಎಲ್ಲಾ ಧರ್ಮಗುರುಗಳ ಪರವಾಗಿ ಆಶೀರ್ವಚನ ನೀಡಿದರು. ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಚರ್ಚ್ ಗಳ ಧರ್ಮಗುರುಗಳು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಚರ್ಚ್ ನ ಪ್ರಧಾನ ಧರ್ಮಗುರುಗಳಾದ ವಂದನೀಯ ಗ್ರೆಗರಿ ಪಿರೇರಾ ಹಾಗೂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್ , ಕಾರ್ಯದರ್ಶಿ ಪ್ರೀತಿ ಲ್ಯಾನ್ಸಿ ಪಿರೇರಾ, ಶಿಕ್ಷಕಿ ಮೇರಿ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ಸ್ಟೇನಿ ಡಿಸೋಜ ಮತ್ತು ಇವ್ಲೀನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ಆರ್ಚ್ ಬಿಷಪ್ ಅತ್ಯಂತ ಮೇಲು ಹುದ್ದೆಯಾಗಿದ್ದು ಇವರು ಚರ್ಚ್ ಗಳಿಗೆ ಭೇಟಿನೀಡುವುದು ವಿರಳ. ಈ ನಿಟ್ಟಿನಲ್ಲಿ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಬೊರಿಮಾರ್ ಚರ್ಚ್ ಗೆ ಆರ್ಚ್ ಬಿಷಪ್ ಡಾ| ಮಚಾದೊರವರು ಭೇಟಿ ನೀಡುತ್ತಿರುವುದು ಹಬ್ಬದ ಸಂಭ್ರಮ ತಂದಿತ್ತು. ಈ ವೇಳೆ ಆರ್ಚ್ ಬಿಷಪ್‌ರವರ ಹುಟ್ಟುಹಬ್ಬ ಆಚರಣೆ ನಡೆಯಿತು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿದವು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.