ಬೆಂಗಳೂರಿನಿಂದ ನಗರಕ್ಕೆ ದಾಖಲೆಪತ್ರ ಇಲ್ಲದೆ ಸಾಗಾಟ ಮಾಡುತ್ತಿದ್ದ 1 ಕೋಟಿ ರೂ. ನಗದು ಹಣವನ್ನು ಮಂಗಳೂರು ಬಂದರು ಪೊಲೀಸರು ಶುಕ್ರವಾರ ಬೆಳಗ್ಗೆ ಕಾರ್‌ಸ್ಟ್ರೀಟ್ ಬಳಿ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದರು. ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ಮಂಜುನಾಥ (56) ಬಂಧಿತ ಆರೋಪಿ. ಬೆಂಗಳೂರಿನ ವ್ಯಕ್ತಿಯೊಬ್ಬರು ನೀಡಿದ ನಗದು ಮೊತ್ತವನ್ನು ಮಂಗಳೂರಿನಲ್ಲಿ ವ್ಯಕ್ತಿಗೆ ನೀಡಲು ತೆಗೆದುಕೊಂಡು ಬಂದಿದ್ದನು. ಇನ್ನೊಬ್ಬರು ನೀಡುವ ವಸ್ತುವನ್ನು ಪಡೆದುಕೊಂಡು ಬರುವಂತೆ ನಗದು ನೀಡಿದ ವ್ಯಕ್ತಿ ಹೇಳಿದ್ದ. ಅದರಂತೆ ಹಣ ಹಿಡಿದುಕೊಂಡು ಮಂಗಳೂರಿಗೆ ಬಂದಿರುವುದಾಗಿ ಮಂಜುನಾಥ್ ವಿಚಾರಣೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ.
ಮಂಗಳೂರಿನಲ್ಲಿ ಹವಾಲ ಸೇರಿದಂತೆ ವಿವಿಧ ರೀತಿಯ ನಗದು ವಹಿವಾಟಿನ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅಕ್ರಮ ನಗದು ಸಾಗಾಟ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ನಸುಕಿನ ಜಾವ ಗಸ್ತು ನಿರತ ಬಂದರು ಇನ್‌ಸ್ಪೆಕ್ಟರ್ ಗೋವಿಂದರಾಜ್, ಸಿಬ್ಬಂದಿ ನಗರದ ಕಾರ್‌ಸ್ಟ್ರೀಟ್ ಬಳಿ ಆರೋಪಿಯ ಬ್ಯಾಗ್‌ನ್ನು ಪರಿಶೀಲನೆ ನಡೆಸಿದ್ದರು. ಆಗ ಬ್ಯಾಗ್‌ನಲ್ಲಿ 2 ಸಾವಿರ ಹಾಗೂ 500ರೂ. ಮುಖಬೆಲೆಯ ನೋಟು ಪತ್ತೆಯಾಗಿದ್ದು, ಸುಮಾರು ಒಂದು ಕೋಟಿ ರೂ. ಮೌಲ್ಯವಿತ್ತು.