ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಗುರುವಾರ ಬೆಳಗ್ಗೆಯೇ ಕಚೇರಿ ಸಿಬ್ಬಂದಿ ಪೊರಕೆ ಹಿಡಿದು ಮೆಟ್ಟಿಲು ಗುಡಿಸುತ್ತಿದ್ದರೆ, ಫೈಲುಗಳನ್ನು ಕಟ್ಟಿ ಕಾರಿಡಾರ್ ಗಳನ್ನು ಸಾರ್ವಜನಿಕರಿಗೆ ತೆರವುಗೊಳಿಸುವ ಕಾರ್ಯ ನಡೆಯಿತು.
ಈ ಕುರಿತು ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ಸಣ್ಣರಂಗಯ್ಯ, ಈಗಾಗಲೇ ಮಿನಿ ವಿಧಾನಸೌಧದ ಲಿಫ್ಟ್ ಸಾರ್ವಜನಿಕರಿಗೆ ಉಪಯೋಗಿಸಲು ಅನುಕೂಲವಾಗುವಂತೆ ತಂತ್ರಜ್ಞರಿಗೆ ಪತ್ರ ಬರೆಯಲಾಗಿದೆ. ಜನರೇಟರ್ ಮತ್ತು ಬ್ಯಾಟರಿಯನ್ನು ಸುಸ್ಥಿತಿಯಲ್ಲಿಡಲು ಸಂಬಂಧಿಸಿದ ಇಲಾಖಾಧಿಕಾರಿಗಳ ಸಹಕಾರ ಕೋರಲಾಗಿದೆ. ವಾರದೊಳಗೆ ಸಮಸ್ಯೆಯನ್ನು ಪರಿಹರಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.
ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ತಾಲೂಕು ಕಚೇರಿ ಸಿಬ್ಬಂದಿ ಕಾರಿಡಾರ್ ಗಳಲ್ಲಿರುವ ಕಾಗದಪತ್ರಗಳನ್ನು ತೆರವುಗೊಳಿಸಿ ನಿಗದಿಪಡಿಸಿದ ಜಾಗದಲ್ಲಿಡುವ ಕಾರ್ಯವನ್ನು ನಡೆಸುತ್ತಿದ್ದರೆ, ಸಿಬ್ಬಂದಿಯೋರ್ವರು ಮೆಟ್ಟಿಲುಗಳನ್ನು ಶುಚಿಗೊಳಿಸುತ್ತಿರುವುದು ಗುರುವಾರ ಬೆಳಗ್ಗೆ ಕಂಡುಬಂತು.
ಸಾರ್ವಜನಿಕರ ಸಹಕಾರವೂ ಮುಖ್ಯ:
ಮಿನಿ ವಿಧಾನಸೌಧದ ಗೋಡೆಗೆ ಕಾಲಿಟ್ಟು ಗಲೀಜು ಮಾಡುವುದು, ಎಲ್ಲೆಂದರಲ್ಲಿ ಉಗಿಯುವುದು, ಶೌಚಾಲಯಕ್ಕೆ ಹೋದರೆ ನೀರು ಹಾಕದೇ ಮರಳುವುದು, ಕಸದ ಕೊಂಪೆಯನ್ನಾಗಿಸಿ ಕಟ್ಟಡವನ್ನು ಅಶುಚಿತ್ವದೆಡೆಗೆ ಮಾಡುವ ಕಾರ್ಯವನ್ನು ಇಲ್ಲಿಗೆ ಆಗಮಿಸುವವರೂ ಮಾಡುತ್ತಿರುವ ಕಾರಣ ಸಾರ್ವಜನಿಕರೂ ಈ ಕುರಿತು ಜಾಗೃತರಾಗಿ ಕಟ್ಟಡದ ಶುಚಿತ್ವದ ಕುರಿತು ಕಾಳಜಿ ವಹಿಸಬೇಕು, ಕಸ ಕಡ್ಡಿಗಳನ್ನು ಎಸೆಯದೆ ಆಡಳಿತದೊಂದಿಗೆ ಸಹಕರಿಸಬೇಕು ಎಂದು ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ತಿಳಿಸಿದರು.
ಕರೆಂಟ್ ಕೈಕೊಟ್ಟರೆ ಆಧಾರ್, ನೆಮ್ಮದಿ ಸಹಿತ ಕಂಪ್ಯೂಟರ್ ಬಳಕೆಯಿಂದ ಮಾಡುವ ಎಲ್ಲ ಕೆಲಸ ಕಾರ್ಯಗಳೂ ಸ್ಥಗಿತಗೊಳ್ಳುತ್ತವೆ, ಜನರೇಟರ್ ವ್ಯವಸ್ಥೆಯನ್ನು ಶೀಘ್ರ ಸ್ಥಾಪಿಸಬೇಕು ಹಾಗೂ ಅದು ನಿರಂತರವಾಗಿ ನಡೆಯಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…