ವಿಟ್ಲ: ಎಂ.ಫ್ರೆಂಡ್ಸ್ ಮಂಗಳೂರು ಇದರ ವತಿಯಿಂದ ಕುಳ ಗ್ರಾಮದ ಕಾರ್ಯಾಡಿ ಜನತಾ ಕಾಲನಿ ನಿವಾಸಿಗಳೊಂದಿಗೆ ಇಫ್ತಾರ್ ಕೂಟವು ಗುರುವಾರ ಕಾರ್ಯಾಡಿ ತಾಜುಲ್ ಉಲಮಾ ಮಸೀದಿ ವಠಾರದಲ್ಲಿ ನಡೆಯಿತು.
ಮುಹಮ್ಮದ್ ಸಫ್ವಾನ್ ಜೌಹರಿ ಅರಳ ಅವರು ರಂಝಾನ್ ಸಂದೇಶ ನೀಡಿ ಮಾತನಾಡಿ ದೇವರ ಸೇವೆ ಮಾಡಿದಾಗ ದೇವರ ಅನುಗ್ರಹ ನಮ್ಮ ಮೇಲೆ ಸದಾ ಇರುತ್ತದೆ. ಅನ್ನದಾನ ಶ್ರೇಷ್ಠದಾನವಾಗಿದೆ. ಇಂತಹ ಕಾರ್ಯಗಳನ್ನು ಮಾಡಿದಾಗ ದೇವರು ಮೆಚ್ಚುತ್ತಾನೆ. ಕೆಲವು ವರ್ಷಗಳ ಹಿಂದೆ ವಾಟ್ಸಾಪ್ ಮೂಲಕ ಪ್ರಾರಂಭಗೊಂಡ ಎಂ ಫ್ರೆಂಡ್ಸ್ ಇಂದು ಟ್ರಸ್ಟಿಯಾಗಿ ನಿರಂತರ ಬಡವರ ಸೇವೆಯಲ್ಲಿ ನಿರತವಾಗಿದ್ದು, ಶ್ಲಾಘನೀಯ ಎಂದರು.
ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಗೋಳ್ತಮಜಲು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲರ ಜತೆ ಬೆರೆತು ಇಫ್ತಾರ್ಕೂಟದಿಂದ ಸೌಹಾರ್ದತೆ ಗಟ್ಟಿಯಾಗುತ್ತದೆ. ಮುಂದಿನ ದಿನಗಳಲ್ಲಿ ಇದೇ ಗ್ರಾಮದಲ್ಲಿ ಹಲವು ಕಾರ್ಯಕ್ರಮಗಳ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಸಮಾರಂಭದಲ್ಲಿ ಕಾರ್ಯಾಡಿ ಜನತಾ ಕಾಲನಿಯ ಬಡ ಅಶಕ್ತರಿಗೆ ರಂಝಾನ್ ರೇಶನ್ ಕಿಟ್ ಹಾಗೂ ಮಸೀದಿಯ ಕೊಳವೆಬಾವಿಗೆ ಧನಸಹಾಯ ವಿತರಿಸಲಾಯಿತು. ಕಾರ್ಯಾಡಿ ಮಸೀದಿ ಖತೀಬ್ ಸಲೀಮ್ ಸಅದಿ ದುವಾ ನೆರವೇರಿಸಿದರು.
ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ಹಾಗೂ ಮಸೀದಿ ಅಧ್ಯಕ್ಷರಾದ ಉಸ್ಮಾನ್ ಕಾರ್ಯಾಡಿ, ಎಂ.ಫ್ರೆಂಡ್ಸ್ ಟ್ರಸ್ಟಿಗಳಾದ ಟಿ.ಕೆ. ಮಹಮ್ಮದ್ ಟೋಪ್ಕೋ ಜ್ಯುವೆಲ್ಲರಿ, ಕೆ.ಪಿ.ಸಾದಿಕ್ ಪುತ್ತೂರು, ಮಹಮ್ಮದ್ ರಿಯಾಝ್ ಪುತ್ತೂರು, ಇರ್ಶಾದ್ ಮಂಗಳೂರು, ಮುಸ್ತಫಾ ಅಹ್ಮದ್ ಗೋಳ್ತಮಜಲು, ಆರಿಫ್ ಬೆಳ್ಳಾರೆ, ವಿ.ಎಚ್.ಅಶ್ರಫ್ ವಿಟ್ಲ, ಝುಬೈರ್ ವಿಟ್ಲ, ಅನ್ಸಾರ್ ಬೆಳ್ಳಾರೆ, ಹಾರಿಸ್ ಕಾನತ್ತಡ್ಕ, ಅಬ್ಬಾಸ್ ಕಲ್ಲಂಗಳ, ಕಲಂದರ್ ಪರ್ತಿಪ್ಪಾಡಿ, ಇರ್ಶಾದ್ ವೇಣೂರು, ರಫೀಕ್ ನೆಟ್ಲ ಮೊದಲಾದವರು ಉಪಸ್ಥಿತರಿದ್ದರು.
ಎಂ.ಫ್ರೆಂಡ್ಸ್ ಕೋಶಾಧಿಕಾರಿ ಅಬೂಬಕರ್ ನೋಟರಿ ವಿಟ್ಲ ಸ್ವಾಗತಿಸಿದರು. ಟ್ರಸ್ಟಿ ಅಡ್ವಕೇಟ್ ಶಾಕಿರ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು. ಡಿ.ಎಂ. ರಶೀದ್ ಉಕ್ಕುಡ ವಂದಿಸಿದರು.