ಬಂಟ್ವಾಳನ್ಯೂಸ್ ವರದಿ
ಇಡೀ ಜಿಲ್ಲೆಯಲ್ಲಷ್ಟೇ ಅಲ್ಲ, ತಾಲೂಕಿನ ಇತರ ಭಾಗಗಳಲ್ಲಿದ್ದ ನೀರಿನ ಸಮಸ್ಯೆ ಬಂಟ್ವಾಳಕ್ಕೆ ಕೊನೆಗೂ ತಟ್ಟಿದೆ. ಕಾರಣ ನೇತ್ರಾವತಿಯಲ್ಲಿ ನೀರು ಬರಿದಾಗಿದೆ. ಸರಬರಾಜಾಗುವ ಪೈಪುಗಳಲ್ಲಿ ನೀರು ಹರಿಯಬೇಕಿದ್ದರೆ, ನದಿಯಿಂದ ನೀರನ್ನು ಲಿಫ್ಟ್ ಮಾಡಬೇಕು. ಅಲ್ಲೇ ನೀರಿನ ಕೊರತೆ.
ಪ್ರಾಕೃತಿಕ ವೈಪರೀತ್ಯದಿಂದ ನೀರು ಕಡಿಮೆಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಬಂಟ್ವಾಳದಲ್ಲಿ ನದಿ ಮಧ್ಯದಲ್ಲಿರುವ INTAKE WELL ನ ಆಜುಬಾಜಿನಲ್ಲೆಲ್ಲ ಮರಳುಮಿಶ್ರಿತ ಮಣ್ಣು ತುಂಬಿಹೋಗಿದೆ. ನೀರು ಖಾಲಿಯಾದಾಗ ದೊರಕುವ ಮಣ್ಣುನೀರು ಅದು. ಅಲ್ಲಿಂದ ನೀರನ್ನು ಲಿಫ್ಟ್ ಮಾಡಿ ಜಾಕ್ ವೆಲ್ ಗೆ ಸರಬರಾಜು ಮಾಡಿ, ನೀರನ್ನು ಸೋಸಿ ಪೈಪುಗಳಲ್ಲಿ ಸಾಗಿಸಬೇಕಾದರೆ, ನೀರಿನ ಒರತೆ ಜಾಸ್ತಿಯಾಗಬೇಕು. ಆದರೆ ಈಗ INTAKE WELL ನ ಇನ್ ಟೇಕ್ ಗೆ ಕುತ್ತು ಬಂದಿದೆ.
ಏನು ಮಾಡುತ್ತಿದ್ದಾರೆ
ನಗರ ನೀರು ಸರಬರಾಜು ಮಂಡಳಿಯ ಎಂಜಿನಿಯರ್ ಶುಭಲಕ್ಷ್ಮಿ ಹೇಳಿದಂತೆ ಇದೀಗ ಯಂತ್ರಗಳು ಮತ್ತು ಕಾರ್ಮಿಕರ ಸಹಾಯದಿಂದ ಮಣ್ಣುಹೊಯ್ಗೆ ಮಿಶ್ರಿತ ಭಾಗವನ್ನು ತೆರವುಗೊಳಿಸಿ, ನೀರ ಹರಿವು ಜಾಸ್ತಿ ಮಾಡುವ ಕೆಲಸ ಆರಂಭಗೊಂಡಿದೆ. ಹೀಗಾದರೆ ನೀರು ಎರಡು ದಿನಕ್ಕೊಮ್ಮೆಯಾದರೂ ದೊರಕುವ ವಿಶ್ವಾಸ.
ಈ ಮಧ್ಯೆ ಪುರಸಭೆ ಪ್ರಕಟಣೆ ಹೊರಡಿಸಿ, ಎರಡು ದಿನಕ್ಕೊಮ್ಮೆ ನೀರಿನ ರೇಷನಿಂಗ್ ಘೋಷಿಸಿದೆ. ಬಂಟ್ವಾಳ ಪುರವಾಸಿಗಳು ಎಚ್ಚರದಿಂದ ನೀರು ಬಳಕೆ ಮಾಡುವುದೊಳಿತು.
ಶಾಸಕ ಭೇಟಿ:
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಜಾಕ್ ವೆಲ್ ಪ್ರದೇಶಕ್ಕೆ ಗುರುವಾರ ಮಧ್ಯಾಹ್ನ ಭೇಟಿ ನೀಡಿದರು. ಗುರುವಾರ ಬೆಳಿಗ್ಗೆಯಿಂದ ಪುರಸಭಾ ವ್ಯಾಪ್ತಿಯ ಮನೆಗಳಿಗೆ ನೀರು ಪೂರೈಕೆಯಿಲ್ಲದೆ ಸ್ಥಗಿತಗೊಂಡ ಕಾರಣ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಜಕ್ರಿಬೆಟ್ಟು ಜಾಕ್‌ವೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೇತ್ರಾವತಿ ನದಿ ಮಧ್ಯೆ ಇರುವ ಇನ್ ಟೇಕ್ ವೆಲ್ ವೀಕ್ಷಿಸಿದ ಶಾಸಕರು ಕ.ನ.ನೀ.ಸ.ಒ.ಮಂಡಳಿಯ ಇಂಜಿನಿಯರ್ ಶೋಭಾಲಕ್ಷ್ಮಿ ಹಾಗೂ ಪುರಸಭೆ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಅವರ ಜೊತೆ ಮಾತುಕತೆ ನಡೆಸಿ ನೀರಿನ ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನೀರಿನ ಮಟ್ಟ ಕುಸಿದ ಕಾರಣ ಸಮಗ್ರ ಕುಡಿಯುವ ನೀರಿನ ಯೋಜನೆಯ ಜಾಕ್‌ವೆಲ್ ಮೂಲಕ ನೀರನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ. ಆದ್ದರಿದ ಸದ್ಯಕ್ಕೆ ಇನ್ ಟೇಕ್ ವೆಲ್ ಬಳಿ ಬಂಡ್ ಹಾಕಿ ನೀರು ಸಂಗ್ರಹಿಸಿ ಪಂಪ್ ಮಾಡಲಾಗುವುದು, ಅಲ್ಲದೆ ಹಳೆ ಜಾಕ್‌ವೆಲ್ ಬಳಿ ನದಿಯಲ್ಲಿ ಸಾಕಷ್ಟು ನೀರಿರುವ ಬಗ್ಗೆ ಮಾಹಿತಿ ಇದ್ದು ಅದನ್ನು ಕೊಡುವ ಬಗ್ಗೆ ಇಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಜನರಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು. ಈ ಸಂದರ್ಭ ಪುರಸಭಾ ಸದಸ್ಯ ಗೋವಿಂದ ಪ್ರಭು, ಮಾಜಿ ಸದಸ್ಯ ಭಾಸ್ಕರ್ ಟೈಲರ್, ಎಂಜಿನಿಯರ್ ತೇಜೋಮೂರ್ತಿ ಪ್ರಮುಖರಾದ ಸುದರ್ಶನ ಬಜ ಮೊದಲಾದವರು ಹಾಜರಿದ್ದರು.