ಕುಡಿಯುವ ನೀರು ಒದಗಿಸಲು ಗರಿಷ್ಠ ಆದ್ಯತೆ, ತುರ್ತು ಕ್ರಮಕ್ಕೆ ಸೂಚನೆ
ಬಂಟ್ವಾಳ ತಾಪಂ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ ತಾಲೂಕು ಮಟ್ಟದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಇಲಾಖಾಧಿಕಾರಿಗಳ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕಿನ ಪ್ರಗತಿ ಕುಂಠಿತವಾಗಿರುವ ಬಗ್ಗೆ ಜಿಪಂ ಸಿಇಒ ಡಾ. ಆರ್. ಸೆಲ್ವಮಣಿ ತೀವ್ರ ಕಳವಳ ವ್ಯಕ್ತಪಡಿಸಿ, ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಜಿಪಂ ಕಾರ್ಯನಿರ್ವಣಾಧಿಕಾರಿ ಹೇಳಿದ್ದಿಷ್ಟು..
ತುರ್ತು ಕುಡಿಯುವ ನೀರಿನ ಸಮಸ್ಯೆ ತಾಲೂಕಿನ ಎಲ್ಲೆಲ್ಲಿ ಇದೆಯೋ ಅವುಗಳ ಬಗ್ಗೆ ಗರಿಷ್ಠ ಆದ್ಯತೆ ನೀಡಿ ಒದಗಿಸಲು ಕ್ರಮ ಕೈಗೊಳ್ಳಬೇಕು
ಆದ್ಯತೆ ಮೇರೆಗೆ ಎಲ್ಲೆಲ್ಲಿ ಸಮಸ್ಯೆ ಇದೆಯೋ ಅಲ್ಲಿ ಒದಗಿಸುವ ಕಾರ್ಯ ನಡೆಸಿ, ಜೂನ್ 1ರಂದು ಮಳೆ ಶುರುವಾಗುವ ಮೊದಲು ಸಿದ್ಧತೆಗಳನ್ನೂ ನಡೆಸಬೇಕು. ಯಾವುದೇ ದೂರುಗಳು ಬಾರದಂತೆ ಕಾರ್ಯನಿರ್ವಹಿಸಬೇಕು
ಪ್ರತಿಯೊಂದು ಬೋರ್ ವೆಲ್ ರೀಚಾರ್ಜ್ ಆಗಬೇಕು, ಪ್ರತಿಯೊಂದು ಪಂಚಾಯತ್ ನಲ್ಲಿ ವೆಂಟೆಡ್ ಡ್ಯಾಂ ಕನಿಷ್ಠ ಮೂರು ನಿರ್ಮಾಣವಾಗುವಂತೆ ಪಿಡಿಒಗಳು ಆಸ್ಥೆ ವಹಿಸಬೇಕು.
ವಾರದೊಳಗೆ ಪ್ರತಿ ಪಂಚಾಯತ್ ಗಳ ಪಿಡಿಒಗಳು 10 ಹೊಸ ಕೆಲಸಗಳನ್ನು ಗುರುತಿಸಿ ಈ ಕುರಿತು ಕಾರ್ಯಪ್ರವೃತ್ತರಾಗಬೇಕು
೩೬ ಅಂಗನವಾಡಿ ಕಟ್ಟಡಗಳ ಪೈಕಿ ೨೯ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣವಾಗಿದೆ. ನೀರಿನ ಸಮಸ್ಯೆಯಿಂದ ಕಟ್ಟಡ ನಿರ್ಮಾಣ ಬಾಕಿ ಉಳಿದಿರುವ ಅಂಗನವಾಡಿ ಕೇಂದ್ರಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಹೇಶ್, ನೆರವು ಘಟಕದ ಮಂಜುಳಾ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದರು, ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನ ಇಲಾಖೆ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಹಾಗೂ ಪಂಚಾಯಿತಿ ಪಿಡಿಓಗಳು ಹಾಜರಿದ್ದರು.