ಮಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಮಹಿಳೆಯ ಕೊಲೆ ಪ್ರಕರಣದ ಆರೋಪಿಗಳನ್ನು ಸಿಟಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೆಲೆನ್ಸಿಯಾ ನಿವಾಸಿ ಜೋನ್ಸ್ ಸ್ಯಾಮ್ಸನ್ ಮತ್ತು ಆತನ ಪತ್ನಿ ವಿಕ್ಟೋರಿಯಾ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದು, ಬಂಧನ ಸಂದರ್ಭ ಆರೋಪಿ ಗಾಯ ಮಾಡಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿಟಿ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್, ಶ್ರೀಮತಿ ಶೆಟ್ಟಿ ಅವರೊಂದಿಗೆ ಆರೋಪಿ ಸ್ಯಾಮ್ಸನ್ ಹಣಕಾಸಿನ ವ್ಯವಹಾರ ಇಟ್ಟುಕೊಂಡಿದ್ದು, ಶ್ರೀಮತಿ ಶೆಟ್ಟಿ ಬಾಕಿ ವಸೂಲಿಗೆಂದು ಬಂದಾಗ ಆಕೆಯೊಂದಿಗೆ ಜಗಳವಾಗಿದೆ. ಈ ಸಂದರ್ಭ ಆರೋಪಿ ಆಕೆಯನ್ನು ಹೊಡೆದು ಕೊಂದಿದ್ದಾನೆ. ಇದಕ್ಕೆ ಆತನ ಪತ್ನಿ ವಿಕ್ಟೋರಿಯಾ ಮಥಾಯಸ್ ಸಾಥ್ ನೀಡಿರುವುದಾಗಿ ಶಂಕಿಸಲಾಗಿದ್ದು, ಶನಿವಾರ ಈ ಘಟನೆ ನಡೆದಿದೆ ಎಂದರು.
ಹತ್ಯೆ ಬಳಿಕ ಆಕೆಯ ಶವವನ್ನು ಮನೆಯಲ್ಲೇ ಇರಿಸಿದ ಆರೋಪಿ ದಂಪತಿ, ಶವವನ್ನು ತುಂಡರಿಸಿ, ಬೇರೆ ಬೇರೆ ಚೀಲಗಳಲ್ಲಿಟ್ಟು, ಮಧ್ಯರಾತ್ರಿ ಕೆಪಿಟಿ, ನಂದಿಗುಡ್ಡೆಗಳಲ್ಲಿ ಹಾಕಿದ್ದರು. ಇದಕ್ಕಾಗಿ ಆರೋಪಿ ದ್ವಿಚಕ್ರ ವಾಹನ ಬಳಸಿದ್ದಾಗಿ ತಿಳಿಸಿದರು.
ಸುಮಾರು 40ರ ವಯಸ್ಸಿನ ಮಹಿಳೆಯ ಶವ ಭಾನುವಾರ ಪತ್ತೆಯಾಗಿದ್ದನ್ನು ಕಂಡು ಇದೊಂದು ಕೊಲೆ ಪ್ರಕರಣ ಹಾಗೂ ವೈಯಕ್ತಿಕ ದ್ವೇಷಕ್ಕಾಗಿ ನಡೆಸಿದ ಕೃತ್ಯ ಎಂದು ಮೇಲ್ನೋಟಕ್ಕೆ ಕಂಡುಬಂತು. ಪತ್ತೆ ಮಾಡಲು ಮೂರು ತಂಡಗಳು, 30 ಪೊಲೀಸ್ ಅಧಿಕಾರಿಗಳ ಸಿಬ್ಬಂದಿಯನ್ನು ಒಳಗೊಂಡ ತಂಡ ರಚಿಸಿದೆವು. ಅದೇ ದಿನ ಮೃತರ ಪತ್ತೆಹಚ್ಚಲಾಗಿ ಆಕೆ ಶ್ರೀಮತಿ ಶೆಟ್ಟಿ ಹಾಗು ಮಂಗಳೂರಿನಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದು, ಹಣಕಾಸಿನ ವ ್ಯವಹಾರ ನಡೆಸುತ್ತಿರುವುದು ಗೊತ್ತಾಯಿತು.ಇದರ ಬಗ್ಗೆ ಸಾಕಷ್ಟು ತನಿಖೆ ನಡೆಸಿ, ಅವರ ಸಂಪರ್ಕ ಇರುವವರನ್ನೆಲ್ಲ ವಿಚಾರಿಸಿದೆವು. ಈ ಸಂದರ್ಭ ವೈಯಕ್ತಿಕ ದ್ವೇಷದಿಂದ ಆದ ಕೊಲೆ ಎಂದು ಖಚಿತವಾಯಿತು. ನಿನ್ನೆ ಬಂದ ಮಾಹಿತಿ ಆಧಾರದಲ್ಲಿ ಕೊಲೆ ಹಣಕಾಸಿನ ವ್ಯವಹಾರಕ್ಕಾಗಿ ನಡೆದಿದೆ ಎಂದು ತಿಳಿದುಬಂತು. ಈ ಹಿನ್ನೆಲೆಯಲ್ಲಿ ಮಂಗಳೂರು ವೆಲೆನ್ಸಿಯಾ ನಿವಾಯಿಯಾಗಿರುವ ದಂಪತಿ ವಿಚಾರಿಸಿದಾಗ ವಿಚಾರ ಬಯಲಾಯಿತು ಎಂದರು.
ಆರೋಪಿಗಳು ಮೃತರಿಂದ ದುಡ್ಡನ್ನು ಸಾಲವಾಗಿ ತೆಗೆದುಕೊಂಡಿದ್ದರು. ಬಾಕಿ ಹಣ ವಸೂಲಿಗೆ ಶ್ರೀಮತಿ ಶೆಟ್ಟಿ ಹೋದಾಗ, ಶನಿವಾರ ಬೆಳಗ್ಗೆ ಅಲ್ಲಿ ಜಗಳ ಆಗಿ ಜಾನ್ಸನ್ ಶ್ರೀಮತಿ ಶೆಟ್ಟಿ ಹಲ್ಲೆ ನಡೆಸಿ ಅಲ್ಲೇ ಕೊಂದಿದ್ದಾನೆ. ಶವವನ್ನು ಮನೆಯಲ್ಲೇ ಇಟ್ಟು, ಅದನ್ನು ಬೇರೆ ಬೇರೆ ಭಾಗಗಳನ್ನಾಗಿಸಿ, ದ್ವಿಚಕ್ರ ವಾಹನದಲ್ಲಿ ರಾತ್ರಿ ವೇಳೆ ನಗರದ ಮೂರು ಕಡೆಗಳಲ್ಲಿ ಎಸೆದಿರುವುದು ತಿಳಿದುಬಂತು ಎಂದರು.