ಗತಿಸಿದ ಜೀವಗಳ ಸದ್ಗತಿಗೆ ನಡೆಸುವ ಉತ್ತರಕ್ರಿಯೆ, ಶ್ರಾದ್ಧಕರ್ಮಗಳು ಪುಣ್ಯಕಾರ್ಯಗಳು, ಅವು ಅಶುಭವಲ್ಲ. ಶಿವಸನ್ನಿಧಿಯಾಗಿರುವ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಈ ಪುಣ್ಯಕಾರ್ಯಗಳನ್ನು ನಡೆಸಲು ನಿರ್ಮಿಸಲಾದ ಭವನಕ್ಕೆ ಜೀವೋನ್ನತಿ ಎಂಬ ನಾಮಧೇಯವಿರಲಿ ಎಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ಸೋಮವಾರ ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರದ ನೂತನ ಸಭಾಭವನವನ್ನು ಲೋಕಾರ್ಪಣೆಗೊಳಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಸಭಾಭವನಕ್ಕೆ ಹೆಸರನ್ನಿಟ್ಟು, ಈಗಿರುವ ಸನ್ಮತಿ ಸಭಾಂಗಣ ಹವ್ಯಕ್ಕೆ, ಹೊಸದಾಗಿ ನಿರ್ಮಿಸಲಾದ ಸಭಾಂಗಣ ಕವ್ಯಕ್ಕಾಗಿರುವ ಕಾರಣ ಅದಕ್ಕೆ ಜೀವೋನ್ನತಿ ಎಂಬ ಹೆಸರಿರಲಿ, ದೇಹಾತೀತ ಆತ್ಮಕ್ಕಿರುವ ಕರ್ಮಗಳನ್ನು ನಡೆಸುವುದು ನಮ್ಮ ಕರ್ತವ್ಯವಾಗಿದ್ದು, ತಂದೆ, ತಾಯಿಯ, ಪೂರ್ವಜರ ಸದ್ಗತಿಗಾಗಿ ಶ್ರಾದ್ಧಕರ್ಮಗಳನ್ನು ನಡೆಸದಿರುವುದು ಸರಿಯಲ್ಲ ಎಂದರು.
ಧರ್ಮವಿರೋಧಿಗಳು, ನಾಸ್ತಿಕವಾದಿಗಳು ಇಂದು ದೇವಸ್ಥಾನದ ಆಡಳಿತ ವಹಿಸಿಕೊಳ್ಳುತ್ತಿದ್ದಾರೆ ಎಂದು ಕೇರಳದ ವ್ಯವಸ್ಥೆಯನ್ನು ಉಲ್ಲೇಖಿಸಿ ಹೇಳಿದ ಅವರು, ಇಂದು ದೊರೆ ಮತ್ತು ಗುರು ಕಷ್ಟ, ಕ್ಲೇಷಗಳನ್ನು ಸ್ವೀಕರಿಸಿ, ಜನರಿಗೆ ಒಳ್ಳೆಯದನ್ನು ನೀಡಬೇಕು ಎಂದರು.
ಈ ಸಂದರ್ಭ ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಸಾಧಕರಿಗೆ ಟೀಕೆಗಳು ಬರುವುದು ಸಹಜ. ಸ್ವಾಮೀಜಿ ಅವುಗಳನ್ನು ಎದುರಿಸಿ ಸತ್ಕಾರ್ಯಗಳನ್ನು ನಡೆಸುತ್ತಿದ್ದು, ಗೋಸಂರಕ್ಷಣೆ, ಗೋಸ್ವರ್ಗದಂಥ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಅವರನ್ನು ಬೆಂಬಲಿಸುವುದು ನಮ್ಮ ಕರ್ತವ್ಯ ಎಂದರು.
ಮುಖ್ಯ ಅತಿಥಿ ಶಾಸಕ ಯು.ರಾಜೇಶ್ ನಾಯ್ಕ್ ಆಗಮಿಸಿ, ಶುಭ ಹಾರೈಸಿದರು. ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಲ್.ಎನ್.ಕುಡೂರು ಉಪಸ್ಥಿತರಿದ್ದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಕ್ಷೇತ್ರದ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನವನ್ನು ರಾಜ್ಯದಲ್ಲಿ ಪಡೆದ ವಿಟ್ಲ ಜೇಸಿ ಪ್ರೌಢಶಾಲೆಯ ಚಿನ್ಮಯಿ ಮತ್ತು ಪುತ್ತೂರು ವಿವೇಕಾನಂದ ಹೈಸ್ಕೂಲಿನ ಸಿಂಚನಾ ಅವರನ್ನು ಸನ್ಮಾನಿಸಲಾಯಿತು.
ನೂತನ ಕಟ್ಟಡಕ್ಕೆ ನೆರವಾದ ದಾನಿಗಳನ್ನು ಶ್ರೀಗಳು ವಿಶೇಷವಾಗಿ ಅಭಿನಂದಿಸಿ, ಆಶೀರ್ವದಿಸಿದರು.
ಪತ್ರಕರ್ತ ಉದಯಶಂಕರ ನೀರ್ಪಾಜೆ ಕಾರ್ಯಕ್ರಮ ನಿರೂಪಿಸಿದರು. ಸೇವಾ ಸಮಿತಿ ಕಾರ್ಯದರ್ಶಿ ಕೆ.ಟಿ.ಗಣೇಶ್ ದಾನಿಗಳ ಪಟ್ಟಿ ವಾಚಿಸಿದರು. ಗೌರವಾಧ್ಯಕ್ಷ ಸಿ.ವಿ.ಗೋಪಾಲಕೃಷ್ಣ, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್, ಕಲ್ಲಡ್ಕ ವಲಯಾಧ್ಯಕ್ಷ ಯು.ಎಸ್.ಚಂದ್ರಶೇಖರ ಭಟ್ ನೆಕ್ಕಿತರವು ಹಾಗೂ ಸೇವಾ ಸಮಿತಿ ಸದಸ್ಯರು ಈ ಸಂದರ್ಭ ಹಾಜರಿದ್ದರು.
ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಸಭಾ ಕಾರ್ಯಕ್ರಮದ ಬಳಿಕ ಕವಿತಾ ಅಡೂರು ಅವರಿಂದ ಡಿವಿಜಿ ಅವರ ಕಗ್ಗದ ಬೆಳಕು ಕಾರ್ಯಕ್ರಮ ಪ್ರಸ್ತುತಗೊಂಡಿತು.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಬಂಟ್ವಾಳ ಸಹಿತ ದ.ಕ ಜಿಲ್ಲೆ ಹಾಗೂ ರಾಜ್ಯದ ಪ್ರಮುಖ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ ಸುದ್ದಿ, ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127