ರಾಜ್ಯದಾದ್ಯಂತ ಸುಡುಬಿಸಿಲು, ಉರಿಸೆಖೆ. ಏರುತ್ತಿರುವ ತಾಪಮಾನ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅದೇ ಸ್ಥಿತಿ. ಬರಿದಾಗಿರುವ ಅಂತರ್ಜಲ, ಒಣಗಿ ಹೋದ ಬೆಳೆಗಳು, ಕುಡಿಯುವ ಕೊಡ ನೀರಿಗೂ ತತ್ವಾರ: ಜಲಕ್ಷಾಮದಿಂದ ತತ್ತರಿಸುತ್ತಿರುವ ರಾಜ್ಯದ ಬಹುಭಾಗದ ಪರಿಸ್ಥಿತಿಗೆ ಜಿಲ್ಲೆಯೂ ಹೊರತಲ್ಲ. ಹಗಲಿನ ಕೆಲವು ಹೊತ್ತು ಜನರು ಮನೆಯಿಂದ ಹೊರ ಬರಲಾಗದ ಸ್ಥಿತಿ ಇದೆ. ನೀರಿನ ಕೊರತೆ ಇರುವ ಈ ಸನ್ನಿವೇಶದಲ್ಲಿ ಟ್ಯಾಂಕರುಗಳಲ್ಲಿ ನೀರು ಸರಬರಾಜು ಮಾಡಲು ಆಡಳಿತ ಹೆಣಗುತ್ತಿದ್ದರೆ, ನಮ್ಮ ಮನೆ ಬಾಗಿಲಿಗೇ ನೀರು ಬರಬೇಕು, ನಮ್ಮ ಸಂಪು ತುಂಬಿದ ಬಳಿಕವಷ್ಟೇ ಟ್ಯಾಂಕರ್ ಮರಳಬೇಕು ಎಂಬ ಹಠಮಾರಿ ಧೋರಣೆಯನ್ನು ಬಿಟ್ಟು ಊರ ಹಿತದೃಷ್ಟಿಯಿಂದ ಜನರು ಹೊಂದಾಣಿಕೆಯನ್ನು ಮಾಡಿಕೊಳ್ಳುವ ಅನಿವಾರ್ಯತೆ ಇದೆ.
ಈಗಾಗಲೇ ಸಿಕ್ಕಿದ ಛಾನ್ಸ್ ಎಂದು ಲೆಕ್ಕವಿಲ್ಲದಷ್ಟು ಬೋರ್ ವೆಲ್ ಕೊರೆದ ಕಾರಣ ತಾಲೂಕಿನ ತಾಲೂಕಿನ ಬಹುತೇಕ ಬೋರ್ವೆಲ್ಗಳಲ್ಲಿ ರಾತ್ರಿ ಬೆಳಗಾಗುವುದರೊಳಗೆ ನೀರಿಲ್ಲ! ನೇತ್ರಾವತಿಯಲ್ಲಿ ನೀರಿಲ್ಲ, ಬೋರ್ ವೆಲ್ ಗಳಲ್ಲಿ ನೀರು ಕಡಿಮೆ, ಅಂರ್ತಜಲ ಕುಸಿತವಾಗುತ್ತಿದೆ ಎಂದರೆ ಇದಕ್ಕೆ ಯಾರು ಕಾರಣ ಆಡಳಿತವೇ, ಅಥವಾ ನಾವೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಥೇಚ್ಛ ನೀರು ಇದ್ದ ಕಾಲದಲ್ಲಿದ್ದಂತೆಯೇ ನಮ್ಮ ಮನೆಯ ಎಲ್ಲ ಟ್ಯಾಂಕ್, ಸಂಪು, ನೀರು ಸಂಗ್ರಹದ ಜಾಗಗಳಲ್ಲೆಲ್ಲಾ ತುಂಬಿ ತುಳುಕುವಷ್ಟು ನೀರಿನ ಸ್ಟಾಕ್ ಇರಬೇಕು , ಇಲ್ಲದಿದ್ದರೆ ನೀರಿಲ್ಲ ಎಂದು ಬೊಬ್ಬೆ ಹೊಡೆಯುವ ಮಂದಿಯೂ ಇದ್ದಾರೆ. ಕೆಲವೊಮ್ಮೆ ಸಹಾಯವಾಣಿಗಳಿಗೆ ದೂರು ನೀಡುವವರಲ್ಲಿ ಇಂಥವರೂ ಸೇರಿರುತ್ತಾರೆ.
ಕಳೆದ ಬಾರಿ ಉತ್ತಮ ಮಳೆಯಾಗಿದ್ದರೂ ಭೂಮಿಯ ಅಂತರ್ಜಲ ಖಾಲಿ. ನೀರಿಲ್ಲ ಎಂದು ಬೋರ್ ವೆಲ್ ಕೊರೆದರೂ ಹನಿ ನೀರು ದೊರಕಬೇಕಾದರೆ ಆಳಕ್ಕಿಳಿಯಬೇಕು. ಇದು ಬಂಟ್ವಾಳ ತಾಲೂಕಿನಲ್ಲಿ ಸದ್ಯ ಕಂಡುಬರುತ್ತಿರುವ ದೃಶ್ಯ. ಎಲ್ಲಾದರೂ ಕೊಳವೆಬಾವಿ ಕೊರೆದ ಕಡೆ ನೀರು ಕಂಡರೆ ಸಂಭ್ರಮಪಡುವ ಸ್ಥಿತಿ. ಯಥೇಚ್ಛ ನೀರು ಲಭ್ಯವಾಗುತ್ತಿದ್ದ ಕೃಷಿ ಬಳಕೆ ಬೋರ್ವೆಲ್ಗಳಲ್ಲಿ ಇಂದು ಹಲವೆಡೆ ಹನಿ ನೀರೂ ಇಲ್ಲದಂತಾಗಿವೆ. ಸರಕಾರದ ಅಧಿಕೃತ ಲೆಕ್ಕ ಒಂದೆಡೆ ಇದ್ದರೆ, ಅನಧಿಕೃತ ಬೋರ್ವೆಲ್ ಕೊರೆತಕ್ಕೆ ಮಿತಿ ಇಲ್ಲ
ವಾರ್ಷಿಕ ಮಳೆಯ ನೀರಿನ ಶೇ.೩೧.೩ ಭಾಗ ಅಂತರ್ಜಲ ಸೇರುತ್ತದೆ. ಆದರೆ ಶೇ.೩೫.೧ರಷ್ಟು ಅಂತರ್ಜಲವನ್ನು ಬೋರ್ವೆಲ್ ಮೂಲಕ ಹೊರತೆಗೆಯಲಾಗುತ್ತಿದೆ. ಭೂವಿಜ್ಞಾನಿಗಳ ಪ್ರಕಾರ ಜಲಮರುಪೂರಣ ಕೊರತೆ, ಭೂ ಆಳದ ನೀರಿನ ಸಂಚಾರ ಬದಲಾವಣೆ ಜಲಮಟ್ಟ ಕುಸಿಯುತ್ತಿರುವುದಕ್ಕೆ ಮೂಲ ಕಾರಣ. ಸದ್ಯಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದ್ದರೂ ವಿಪರೀತ ಕೊಳವೆಬಾವಿ ಕೊರೆಯುವುದರಿಂದ ಅಂತರ್ಜಲಕ್ಕೆ ಮತ್ತಷ್ಟು ಪೆಟ್ಟು. ಹೀಗಿರುವ ಸಂದರ್ಭ ಈ ಮಳೆಗಾಲದಲ್ಲಾದರೂ ಜಲಜಾಗೃತಿ ಅಗತ್ಯ.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಬಂಟ್ವಾಳ ಸಹಿತ ದ.ಕ ಜಿಲ್ಲೆ ಹಾಗೂ ರಾಜ್ಯದ ಪ್ರಮುಖ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ ಸುದ್ದಿ, ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127