ಮಂಗಳೂರು: ಮಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದಗಳೊಂದಿಗೆ, ಬ್ರಹ್ಮಶ್ರೀ ವೇದಮೂರ್ತಿ ದೇರೆಬೈಲು ವಿಠಲದಾಸ ತಂತ್ರಿ ಅವರ ನೇತೃತ್ವದಲ್ಲಿ ಮೇ.13ರಂದು 7.10ಕ್ಕೆ ಶ್ರೀದೇವರ ಬಿಂಬ ಪ್ರತಿಷ್ಠೆ, ಮೇ.14ರಂದು ಬೆಳಗ್ಗೆ 8.10ಕ್ಕೆ ಬ್ರಹ್ಮಕಲಶಾಭಿಷೇಕ ಮಹೋತ್ಸವ ನೆರವೇರಲಿದೆ.

ಉತ್ಸವ ಪ್ರಯುಕ್ತ ಮೇ.12ರಿಂದ 14ರವರೆಗೆ ಪ್ರತಿದಿನ ವೈದಿಕ ಕಾರ್ಯಕ್ರಮ, ಧಾರ್ಮಿಕ ಸಭೆ ನಡೆಯಲಿದೆ. ಮೇ.12ರಂದು ಬೆಳಗ್ಗೆಯಿಂದ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಸಾಯಂಕಾಲ 3.30ಕ್ಕೆ ಹೊರಕಾಣಿಕೆ ಮೆರವಣಿಗೆ ಕ್ಷೇತ್ರಕ್ಕೆ ಆಗಮಿಸಲಿದೆ. ಸಾಯಂಕಾಲ 6ಗಂಟೆಗೆ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮೇಶ್ ಆಳ್ವ, ಕಜೆ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಬಳಿಕ ಶ್ರೀಕೃಷ್ಣ ಸಂಧಾನ-ಹರಿದಾಸರಾದ ಶರತ್ ಶೆಟ್ಟಿ ಪಡುಪಳ್ಳಿ ಅವರಿಂದ ಹರಿಕಥಾ ಸತ್ಸಂಗ ನಡೆಯಲಿದೆ. ಮೇ.13ರಂದು ಮಧ್ಯಾಹ್ನ 2.30ರಿಂದ ಮರೋಳಿ ಶ್ರೀಸೂರ್ಯನಾರಾಯಣ ಮಹಿಳಾ ಯಕ್ಷಗಾನ ಮಂಡಳಿಯಿಂದ ಭಾರ್ಗವ ವಿಜಯ ಯಕ್ಷಗಾನ ನಡೆಯಲಿದೆ. ಸಾಯಂಕಾಲ 6ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕಾಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಭಾಶ್ ಶೆಟ್ಟಿ ದೆಮ್ಮಲೆ ವಹಿಸಲಿದ್ದಾರೆ.
ಬಳಿಕ 8 ಗಂಟೆಗೆ ಮಂಗಳಾದೇವಿ ಯಕ್ಷಗಾನ ಮಂಡಳಿಯವರಿಂದ ಶ್ರೀಮಂಗಳಾದೇವಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಮೇ.14ರಂದು ಬೆಳಗ್ಗೆ ಬ್ರಹ್ಮಕಲಶಾಭಿಷೇಕ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಮಧ್ಯಾಹ್ನ 1ಗಂಟೆಯಿಂದ ಪ್ರತಿಭಾ ಸುವರ್ಣ ಅವರಿಂದ ಭಕ್ತಿ ಸಂಗೀತ ನಡೆಯಲಿದೆ. ಮಧ್ಯಾಹ್ನ 2.30ರಿಂದ ವಿಠಲ್ ನಾಯಕ್ ಕಲ್ಲಡ್ಕ ಬಳಗದಿಂದ ಗೀತಾ-ಸಾಹಿತ್ಯ-ಸಂಭ್ರಮ ಕಾರ್ಯಕ್ರಮವಿದೆ. ಸಾಯಂಕಾಲ 6ಗಂಟೆಗೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಂನ ಶ್ರೀಗುರುದೇವಾನಂದ ಸ್ವಾಮೀಜಿ, ಬ್ರಹ್ಮಶ್ರೀ ದೇರೆಬೈಲು ವಿಠಲದಾಸ ತಂತ್ರಿ, ನಡುಬೊಟ್ಟು ಶ್ರೀಉದ್ಭವ ರೌದ್ರನಾಥೇಶ್ವರ ಕ್ಷೇತ್ರದ ಧರ್ಮದರ್ಶಿ ರವಿ.ಎನ್ ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಮಂಜಯ್ಯ ಶೆಟ್ಟಿಗುಂಡಿಲಗುತ್ತು ಅಧ್ಯಕ್ಷತೆವಹಿಸಲಿದ್ದು, ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10ಗಂಟೆಯಿಂದ ಚಾ ಪರ್ಕ ತಂಡದ ಕಲಾವಿದರಿಂದ `ಪನಿಯರೆ ಆವಂದಿನ’ ತುಳು ಹಾಸ್ಯಮಯ ನಾಟಕ ನಡೆಯಲಿದೆ.