ಬಿ.ಸಿ.ರೋಡಿನಲ್ಲಿ ಫ್ಲೈಓವರ್ ಕೆಳಗಿಳಿಯುವ ಹಾಗೂ ಸರ್ವೀಸ್ ರೋಡ್ ಹೆದ್ದಾರಿಗೆ ಸಂಧಿಸುವ ಜಾಗವಾದ ಉದಯ ಲಾಂಡ್ರಿಯ ಮುಂಭಾಗ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ನಡೆಸುವ ಸಂದರ್ಭ ಬೈಕೊಂದು ಆಟೊರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಸವಾರ ಶರೀಫ್ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಫ್ಲೈಓವರ್ ಇಳಿಯುವ ಜಾಗದಲ್ಲೇ ಪೊಲೀಸ್ ಪಡೆ ವಾಹನ ತಪಾಸಣೆಯನ್ನು ಶನಿವಾರ ಮಾಡುತ್ತಿದ್ದ ಸಂದರ್ಭ ಬೈಕೊಂದು ಆಟೊರಿಕ್ಷಾಕ್ಕೆ ಡಿಕ್ಕಿ ಹೊಡೆಯಿತು. ರಿಕ್ಷಾದಲ್ಲಿ ಪ್ರಯಾಣಿಸುತ್ತ ಮಹಿಳೆಯರಿಗೂ ಗಾಯವಾಗಿದ್ದು ಬೈಕ್ ಹಾಗೂ ರಿಕ್ಷಾ ಹಾನಿಗೊಂಡಿದೆ. ಗಾಯಾಳುವನ್ನು ಪೊಲೀಸರು ಇಂಟರ್ ಸೆಪ್ಟರ್ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಜನರ ಆಕ್ರೋಶ:
ಈ ಘಟನೆ ನಡೆದ ಸಂದರ್ಭ ಸಾರ್ವಜನಿಕರು ಜಮಾಯಿಸಿ, ಪೊಲೀಸರ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟನೆಗೆ ಪೊಲೀಸರ ತಪಾಸಣೆಯೇ ಕಾರಣ ಎಂದು ದೂರಿದರು. ವಾಹನ ತಪಾಸಣೆಗೆಂದು ನಿಲುಗಡೆಗೊಳಿಸುವ ಕಾರಣವೇ ಈ ರೀತಿಯ ಅಪಘಾತಗಳು ಸಂಭವಿಸುತ್ತವೆ ಎಂದು ದೂರಿದರು. ಕಳೆದ ವಾರ ಬಿ.ಸಿ.ರೋಡಿನ ಕೈಕಂಬ ಜಂಕ್ಷನ್ ನಲ್ಲಿ ವಾಹನ ತಪಾಸಣೆಯನ್ನು ನಡೆಸುವ ಸಂದರ್ಭ ಟ್ರಾಫಿಕ್ ಜಾಮ್ ಆಗುವಷ್ಟರಮಟ್ಟಿಗೆ ಇಕ್ಕಟ್ಟಿನ ಜಾಗವನ್ನು ಪೊಲೀಸರು ಆಯ್ದುಕೊಂಡಿದ್ದರು ಎಂದು ಈ ಸಂದರ್ಭ ಸಾರ್ವಜನಿಕರು ದೂರಿದರು. ಇದೇ ರೀತಿ ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಕೆಲ ಬಸ್ಸುಗಳು ಹತ್ತು, ಹದಿನೈದು ನಿಮಿಷಗಳ ಕಾಲ ನಿಂತಲ್ಲೇ ನಿಲ್ಲುತ್ತವೆ. ಇದರಿಂದ ವಾಹನದಟ್ಟಣೆ ಪ್ರತಿದಿನ ಆಗುತ್ತಿದ್ದು, ಇವುಗಳನ್ನೂ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಬಂಟ್ವಾಳ ನಗರ ಠಾಣೆಯ ಎಸೈ ಚಂದ್ರಶೇಖರ್ ಸ್ಥಳಕ್ಕೆ ಬಂದು ಜನರು ತೆರಳವಂತೆ ಸೂಚಿಸಿದರು.