ವಿವಿಧ ಕ್ಷೇತ್ರಗಳ ಸಾಧಕರಿಗೆ ಅಭಿನಂದನೆ ಹಾಗೂ ಸನ್ಮಾನ, ಮೆಲೋಡಿಕಾ ಎಂಬ ಅಪರೂಪದ ವಾದ್ಯದ ರಸಗ್ರಹಣ, ವೈಶಾಖ ಮಾಸದ ವಿಶೇಷ ತಿಂಡಿ ತಿನಿಸುಗಳ ಔತಣ. ಅಕ್ಷಯ ತೃತೀಯದಂದು ಇಂತಹ ಅಪರೂಪದ ಕ್ಷಣಕ್ಕೆ ಪುತ್ತೂರಿನ ’ಶ್ರೀಮಾ’ ಮನೆ ಸಾಕ್ಷಿಯಾಯಿತು.
ಪುತ್ತೂರಿನ ನೆಹರು ನಗರದ ಪ್ರೊ. ವೇದವ್ಯಾಸ ರಾಮಕುಂಜ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಯಕ್ಷಗಾನ ಕ್ಷೇತ್ರದ ಪಾತಾಳ ವೆಂಕಟರಮಣ ಭಟ್, ವೈದಿಕ ಕ್ಷೇತ್ರದ ವೇದಮೂರ್ತಿ ಕಾರಿಂಜ ಲಕ್ಷ್ಮೀನಾರಾಯಣ ಆಚಾರ್ಯ, ಶಿಕ್ಷಣ ಕ್ಷೇತ್ರದ ಐತಪ್ಪ ನಾಯ್ಕ್, ಸಂಗೀತ ಕ್ಷೇತ್ರದ ವಿದುಷಿ ಟಿ. ಮೀನಾಕ್ಷಿ ಎಸ್ ರಾವ್, ಪುಸ್ತಕ ಪರಿಚಾರಕ ಪ್ರಕಾಶ ಕುಮಾರ್ ಕೊಡೆಂಕಿರಿ ಅವರ ನಿಸ್ವಾರ್ಥ ಸೇವೆಗಾಗಿ ’ಅಕ್ಷಯ ಗೌರವಾರ್ಪಣೆ’ ಮಾಡಲಾಯಿತು.
ಅಕ್ಷಯ ತೃತೀಯದ ಸಂದರ್ಭದಲ್ಲಿ ಖರೀದಿಸುವುದಕ್ಕಿಂತ ದಾನ ನೀಡುವುದೇ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಈ ವಿಭಿನ್ನ ಕಾರ್ಯಕ್ರಮ ತಿಳಿಸಿತು. ನಿವೃತ್ತ ಪ್ರಾಂಶುಪಾಲರಾಗಿರುವ ಪ್ರೊ. ವೇದವ್ಯಾಸ ರಾಮಕುಂಜ ಪ್ರತೀ ವರ್ಷ ಅಕ್ಷಯ ತೃತೀಯದಂದು ಇಂತಹ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಾರೆ.
ಮುಸ್ಸಂಜೆಯ ಹಿತವಾದ ಗಾಳಿಯೊಂದಿಗೆ ಮೆಲೋಡಿಕಾ ಎಂಬ ವಿಶೇಷ ವಾದ್ಯದ ವಾದನ ಶೋತೃಗಳನ್ನು ಸಂಗೀತ ಲೋಕಕ್ಕೆ ಕರೆದೊಯ್ಯಿತು. ಇದೊಂದು ಪಾಶ್ಚಿಮಾತ್ಯ ವಾದ್ಯವಾಗಿದ್ದು ವಿದೇಶದಲ್ಲಿ ಜನಪ್ರಿಯವಾಗಿದ್ದರೂ, ಭಾರತದಲ್ಲಿ ವಿರಳ. ಶಂಖ ಊದಿದಂತೆ ಊದುತ್ತಾ ಜೊತೆಗೆ ಕೀಬೋರ್ಡ್ ನುಡಿಸುವಂತಹ ವಾದ್ಯ ಇದು.
ಶಿವರಾಮ ಭಾಗವತ್ ಮೆಲೋಡಿಕಾ ವಾದನಕ್ಕೆ ತಬಲಾದಲ್ಲಿ ವಿಶ್ವನಾಥ ನಾಯಕ್ ಸಾಥ್ ನೀಡಿದರು. ನಮ್ಮಮ್ಮ ಶಾರದೆ, ಪವಮಾನ ಜಗದ ಪ್ರಾಣ, ಹರಿ ಮಣೊ ಗೋವಿಂದ ಮಣೊ, ಪಿಳ್ಳಂಗೋವಿಯ ಚೆಲುವ ಕೃಷ್ಣನ, ಅಮ್ಮ ನಾನು ದೇವರಾಣೆ, ಅಂಬಿಗ ನಾ ನಿನ್ನ ನಂಬಿದೆ, ತಂಬೂರಿ ಮೀಟಿದವ ಮೊದಲಾದ ಕೀರ್ತನೆಗಳನ್ನು ಮತ್ತು ದೇವರ ಸ್ತುತಿಗಳನ್ನು ವಾದ್ಯದ ಮೂಲಕವೇ ಪ್ರಸ್ತುತ ಪಡಿಸಿದ ಈ ಕಲಾವಿದರು ಭಕ್ತಿ ಭಾವವನ್ನು ಮೂಡಿಸಿದರು.
ವೈಶಾಖ ಮಾಸದ ತಿಂಡಿ ತಿನಿಸುಗಳು, ಪಾನಕ ಹಾಗೂ ಹಣ್ಣು ಹಂಪಲುಗಳ ಔತಣ ವಿಶೇಷವಾಗಿತ್ತು. ಅಕ್ಷಯ ತೃತೀಯದ ಮಹತ್ವವನ್ನು ಸಾರಿದ ಈ ಕಾರ್ಯಕ್ರಮ ಸಂಗೀತ ಹಾಗೂ ಚಿಂತನೆಯ ಮೂಲಕ ಎಲ್ಲರ ಹೃದಯದ ಬಾಗಿಲು ತೆರೆಯಿತು, ಆ ಮೂಲಕ ಹೊಸತನಕ್ಕೆ ನಾಂದಿ ಹಾಡಿತು.