ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಬಂಟ್ವಾಳ ಸಹಿತ ದ.ಕ ಜಿಲ್ಲೆ ಹಾಗೂ ರಾಜ್ಯದ ಪ್ರಮುಖ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ. ಸುದ್ದಿ, ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127
ವಿಷಯ ಗಂಭೀರವಾಗಿದೆ, ಅಧಿಕಾರಿಗಳೇ ಇತ್ತ ನೋಡಿ ಎನ್ನುತ್ತಿದ್ದಾರೆ ಪ್ರಯಾಣಿಕರು.
ಮಂಗಳೂರು ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟಿ ರಸ್ತೆ ಮೇಲ್ನೋಟಕ್ಕೆ ಸುಂದರವಾಗಿ ಕಾಣಿಸುತ್ತದೆ. ಆದರೆ ದೊಡ್ಡ ಮಳೆಗಾಲ ಶುರುವಾದರೆ ಕಳೆದ ವರ್ಷ ಸಂಭವಿಸಿದ ಮಣ್ಣು ಕುಸಿತ, ಗುಡ್ಡೆ ಕುಸಿತ ಈ ಬಾರಿಯೂ ಮರಳುವ ಭೀತಿ ಎದುರಾಗಿದೆ. ಕಳೆದ ವರ್ಷದ ಅನಾಹುತದಿಂದ ಆದ ರಸ್ತೆಹಾನಿ ಇನ್ನೂ ದುರಸ್ತಿಯಾಗಿಲ್ಲ. ಮಳೆಗಾಲಕ್ಕೆ ಮೊದಲಾದರೂ ಇದನ್ನು ನೆರವೇರಿಸದಿದ್ದರೆ ಜೂನ್ ಬಳಿಕ ಸಂಕಷ್ಟದ ಸರಮಾಲೆ ಎದುರಾಗಬಹುದು. ಇದು ಶಿರಾಡಿಯ ಕತೆಯಾದರೆ ಸಂಪಾಜೆ ಘಾಟಿಯ ಸ್ಥಿತಿಯೂ ಭಿನ್ನವೇನಿಲ್ಲ.
ದೂರದ್ರಷ್ಠಿಯ ಯೋಜನೆ ಅಗತ್ಯ
ಪ್ರತಿ ಮಳೆಗಾಲ ಈ ರಸ್ತೆಯಲ್ಲಿ ಭೂಕುಸಿತ ಸಂಭವಿಸಿ ರಸ್ತೆ ಬಂದ್ ಆಗಿ ಪ್ರಯಾಣಿಕರಿಗೆ ತೊಂದರೆ ಆಗುತ್ತಿರುತ್ತದೆ. ವಾಹನಗಳು ರಸ್ತೆಯಂಚಿಗೆ ಉರುಳಿ ಬಿದ್ದು ಅನಾಹುತಗಳು ಪುನಾರವರ್ತನೆ ಆಗುತ್ತಿರುತ್ತದೆ. ರಸ್ತೆ ಬದಿ ಸುರಕ್ಷತೆಗಳಿಲ್ಲ. ಇದಕ್ಕೆ ದೂರದ್ರಷ್ಠಿಯ ಕೊರತೆ ಕಾರಣ. ಶಾಶ್ವತ ಪರಿಹಾರ ಕ್ರಮಗಳ ಅವಶ್ಯಕತೆ ಇದೆ ಎನ್ನುತ್ತಾರೆ ಪ್ರಯಾಣಿಕರು.
ಏನಾಗಿದೆ:
ಶಿರಾಡಿ ಘಾಟ್ ರಸ್ತೆಯಲ್ಲಿ ಗುಂಡ್ಯದಿಂದ ಹೆಗ್ಗದ್ದೆ ತನಕ ಹಾಸನ ಮತ್ತು ಮಂಗಳೂರು ವಿಭಾಗಗಳ 26 ಕಿ ಮೀ ವ್ಯಾಪ್ತಿಯಲ್ಲಿ ಅಳವಡಿಸಿದ ಕಾಂಕ್ರೀಟ್ ರಸ್ತೆಯಲ್ಲಿ 12 ಕಡೆ ಭೂಕುಸಿತ ಕಳೆದ ಮಳೆಗಾಲದಲ್ಲಿ ಸಂಭವಿಸಿತ್ತು. ಕುಸಿತ ಸಂಭವಿಸಿದ ಸ್ಥಳಗಳಲ್ಲಿ ಕಾಮಗಾರಿಗಳು ಅರೆಬರೆಯಾಗಿಯೇ ಇವೆ. ತಾತ್ಕಾಲಿಕ ಮರಳಿನ ಚೀಲಗಳನ್ನು ಪೇರಿಸಿಟ್ಟು ಮಣ್ಣಿನ ಮೇಲೆ ಟಾರ್ಪಲ್ ಹಾಸಿ ಮುಚ್ಚಲಾಗಿದೆ. ಕಾಂಕ್ರೀಟ್ ಅಳವಡಿಕೆಯಾದ ಸ್ಥಳಗಳ ಮೇಲ್ಭಾಗದಲ್ಲೂ ತಾತ್ಕಾಲಿಕ ಗೋಡೆ ನಿರ್ಮಿಸಲಾಗಿದೆ.
ವಾಹನ ಸಂಚಾರಕ್ಕೆ ತೊಂದರೆ:
ಹೆದ್ದಾರಿ ಕುಸಿತಗೊಂಡ ಸ್ಥಳಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಇದೆ. ಒಂದು ಕಡೆ ಗುಡ್ಡ ಅಪಾಯದ ಸ್ಥಿತಿಯಲ್ಲಿದ್ದರೆ ಇನ್ನೊಂದು ಬದಿ ಕುಸಿತದಿಂದ ರಸ್ತೆ ಇಕ್ಕಟ್ಟಾಗಿದೆ. ರಸ್ತೆ ಎರಡು ಬದಿಗೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ.
ತಜ್ಞರು ಬರ್ತಾರೆ
ಹೆದ್ದಾರಿಯ ಭೂಕುಸಿತ ನಡೆದ ಸ್ಥಳಗಳ ವೀಕ್ಷಣೆಗೆ ಹೈದ್ರಾಬಾದ್‌ನ ವಿಶೇಷ ತಜ್ಞರ ತಂಡ ಮುಂದಿನ ಒಂದು ವಾರದಲ್ಲಿ ಭೇಟಿ ನೀಡಲಿದೆ. ವರದಿ ಅಧಾರಿಸಿ ಕ್ರಮಕ್ಕೆ ಸರಕಾರಕ್ಕೆ ಒಪ್ಪಿಸುತ್ತೇವೆ. ಮಳೆಗಾಲದ ಮುಂಚಿತ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ ಅಧಿಕಾರಿಗಳು.