ಶನಿವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಕಾಡುಕೋಣಗಳು ಹಳ್ಳಿಯ ಮನೆಯೊಂದರ ಗೋಬರ್ ಗ್ಯಾಸ್ ಗುಂಡಿ ಮತ್ತು ಬಾವಿಗೆ ಬಿದ್ದ ಘಟನೆಗಳು ನಡೆದಿವೆ. ಎರಡೂ ಕಾಡುಕೋಣಗಳನ್ನು ಮೇಲಕ್ಕೆತ್ತುವ ಕಾರ್ಯ ನಡೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಬಂಟ್ವಾಳ ತಾಲೂಕಿನ ಕಾಡಬೆಟ್ಟು ಪೂರ್ಲೊಟ್ಟುವಿನಲ್ಲಿ ಗೋಬರ್ ಗ್ಯಾಸ್ ಗುಂಡಿಗೆ ಬಿದ್ದರೆ, ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆಯಲ್ಲಿ ಬಾವಿಗೆ ಕೋಣ ಬಿದ್ದಿದೆ.
ಬಂಟ್ವಾಳದ ಘಟನೆ:
ಕಾಡುಕೋಣವೊಂದು ಗೊಬ್ಬರ ಗ್ಯಾಸ್ ನ ಗುಂಡಿಯೊಳಗೆ ಬಿದ್ದ ಘಟನೆ ಕಾಡಬೆಟ್ಟು ಗ್ರಾಮದ ಕಾಡಬೆಟ್ಟು ಪೂರ್ಲೊಟ್ಟು ಎಂಬಲ್ಲಿ ನಡೆದಿದೆ. ನಿವಾಸಿ ಎಲ್ಪ್ರೆಡ್ ಡಿಸೋಜ ಎಂಬವರ ಮನೆಯ ಗೊಬ್ಬರ ಗ್ಯಾಸ್ ನ ಗುಂಡಿಗೆ ಬಿದ್ದಿದೆ. ಗೊಬ್ಬರ ಗ್ಯಾಸ್ ನ ಗುಂಡಿಯೊಳಗೆ ಬಿದ್ದಿರುವ ಕಾಡು ಕೋಣಕ್ಕೆ ಮತ್ತೆ ಮೇಲೆ ಬರಲು ಸಾಧ್ಯವಾಗದೆ ಸಿಕ್ಕಿಹಾಕಿಗೊಂಡಿದೆ. ಬೆಳಗಿನ ಜಾವ ಮನೆಯವರು ಗೊಬ್ಬರ ಗ್ಯಾಸ್ ಗೆ ಗೊಬ್ಬರ ಹಾಕಲು ಬಂದ ವೇಳೆ ಈ ಘಟನೆ ಬೆಳಕಿಗೆ ಬಂದ ಬಳಿಕ ಅವರು ಬಂಟ್ವಾಳ ಅರಣ್ಯ ಇಲಾಖೆ ಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಬಳಿಕ ಬಂಟ್ವಾಳ ಉಪವಲಯ ಸಂರಕ್ಷಣಾ ಧಿಕಾರಿ ಸುರೇಶ್ ಸ್ಥಳ ಕ್ಕೆ ಬೇಟಿ ನೀಡಿ ಕಾಡು ಕೋಣವನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಿದರು. ವಲಯಾರಣ್ಯಾಧಿಕಾರಿ ಸುರೇಶ್ ಮತ್ತು ತಂಡ ಈಗ ರಕ್ಷಣಾ ಕಾರ್ಯ ನಡೆಸುತ್ತಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಗಳಾದ ವಿನಯ್, ಬಾಸ್ಕರ್, ಸ್ಮಿತಾ, ಅನಿತಾ ಅನಿಲ್ ಹಾಗೂ ಪರಿಸರ ಸ್ನೇಹಿ ಕಿರಣ್ ಪಿಂಟೋ ಮತ್ತು ಗ್ರಾಮಸ್ಥರ ಸ್ಥಳ ದಲ್ಲಿದ್ದು ಕಾಡು ಕೋಣದ ರಕ್ಷಣೆಯಲ್ಲಿ ತೊಡಗಿದ್ದಾರೆ
ಸುಳ್ಯದ ಘಟನೆ:
ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಕೆರೆಗೆ ಕಾಡುಕೋಣ ಬಿದ್ದಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಶನಿವಾರ ಬೆಳಗ್ಗೆ ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಕೆರೆಗೆ ಕಾಡುಕೋಣ ಬಿದ್ದಿರುವುದು ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ಆಗಮಿಸಿ ಕಾಡುಕೋಣವನ್ನು ಕೆರೆಯಿಂದ ಮೇಲೆತ್ತುವ ಪ್ರಯತ್ನ ಮಾಡಿದರು. ಅಡಿಕೆ ಮರದ ಪಾಲವನ್ನು ತಯಾರು ಮಾಡಿ ಕೆರೆಗೆ ಇಳಿಸಿದ್ದು ಕಾಡುಕೋಣ ಈ ಪಾಲದಲ್ಲಿ ಬರುವ ಪ್ರಯತ್ನದಲ್ಲಿದೆ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.