ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದಲ್ಲಿ ಬಂಟ್ವಾಳ ತಾಲೂಕಿನ ಸರಕಾರಿ ಹೈಸ್ಕೂಲುಗಳು ಉತ್ತಮ ಫಲಿತಾಂಶದೊಂದಿಗೆ ಗಮನ ಸೆಳೆದಿದೆ. ಬಂಟ್ವಾಳ ತಾಲೂಕಿನ ಸರಕಾರಿ ಹೈಸ್ಕೂಲುಗಳಿಗೆ ಶೇ.77.78 ಫಲಿತಾಂಶ ದೊರಕಿದ್ದು, 37 ಸರಕಾರಿ ಶಾಲೆಗಳ ಪೈಕಿ ಕೊಡ್ಮಾಣ್ ಶಾಲೆಗೆ ಶೇ.100 ಫಲಿತಾಂಶ ದೊರಕಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಈ ಬಾರಿಯೂ ಶೇ.100 ಫಲಿತಾಂಶ ದೊರಕಿದೆ.ವಗ್ಗ ಶಾಲೆಗೆ ಶೇ.97, ಪಂಜಿಕಲ್ಲು ಶೇ.96, ಸಿದ್ಧಕಟ್ಟೆಗೆ ಶೇ.95 ಫಲಿತಾಂಶ ದಾಖಲಾಗಿದ್ದು, ಉತ್ತಮ ಸಾಧನೆ ಪ್ರದರ್ಶಿಸಿವೆ.
611 ಅಂಕ ಗಳಿಸಿದ ಜಯಗೋವಿಂದ ಪ್ರಥಮ:
ಸರಕಾರಿ ಹೈಸ್ಕೂಲುಗಳಲ್ಲಿ ಕಲಿತ ಮಕ್ಕಳು ಉತ್ತಮ ಶೇಕಡಾವಾರು ಸಾಧನೆಯನ್ನೂ ಮಾಡಿದ್ದಾರೆ. ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ ಜಯಗೋವಿಂದ ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದು, 611 ಅಂಕಗಳನ್ನು ಗಳಿಸುವ ಮೂಲಕ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಪೈಕಿ ತಾಲೂಕಿನಲ್ಲಿ ಮೊದಲ ಸ್ಥಾನ ಪಡೆದಿದ್ದಾನೆ. ಈ ಶಾಲೆಯಲ್ಲಿ ಇದೇ ಮೊದಲಬಾರಿ ವಿದ್ಯಾರ್ಥಿಯೊಬ್ಬನಿಗೆ 611 ಅಂಕಗಳು ಲಭಿಸಿವೆ. ಒಟ್ಟಾರೆಯಾಗಿ ಸರಕಾರಿ ಹೈಸ್ಕೂಲುಗಳಲ್ಲಿ ಕಲಿತ ವಿದ್ಯಾರ್ಥಿಗಳ ಪೈಕಿ ಮತ್ತು ಸರಕಾರಿ ಆಂಗ್ಲ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಈತ ಮೊದಲಿಗನಾಗಿದ್ದಾನೆ. ವಿದ್ಯಾರ್ಥಿಯ ಈ ಸಾಧನೆಗೆ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅಭಿನಂದಿಸಿದ್ದು, ಶೀಘ್ರದಲ್ಲಿ ಶಾಲೆಯಲ್ಲಿ ಸನ್ಮಾನ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಕಲಿತ ಮಾಣಿಲ ಸರಕಾರಿ ಪ್ರೌಢಶಾಲೆಯ ಅನನ್ಯಾ, ಸಾಲೆತ್ತೂರು ಸರಕಾರಿ ಪ್ರೌಢಶಾಲೆಯ ಸೃಷ್ಟಿ ಕೆ.ಕೆ. 600 ಅಂಕಗಳನ್ನು ಗಳಿಸುವ ಮೂಲಕ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಮೊದಲ ಸ್ಥಾನ ಗಳಿಸಿದ ಸರಕಾರಿ ಶಾಲಾ ವಿದ್ಯಾರ್ಥಿಗಳಾಗಿದ್ದಾರೆ.
ಸರಕಾರಿ ಹೈಸ್ಕೂಲುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ಪೊಳಲಿ ಹೈಸ್ಕೂಲಿನ ಸುದೀಪ್ ಕುಮಾರ್ 595, ಕಡೇಶ್ವಾಲ್ಯದ ಅಶ್ವಿತಾ 592, ಸಾಲೆತ್ತೂರಿನ ಲಿಖಿತಾ 589, ಕಡೇಶ್ವಾಲ್ಯದ ವಾಣಿಶ್ರೀ 586, ಕಡೇಶ್ವಾಲ್ಯದ ದೀಕ್ಷಿತ್ 585, ಕಡೇಶ್ವಾಲ್ಯದ ಮಿತ್ರಾಕ್ಷಿ 585, ಶಂಭೂರಿನ ನವ್ಯಾ 585 ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಸಾಧನೆ ತೋರಿಸ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶಿವಪ್ರಕಾಶ್ ತಿಳಿಸಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ಒಟ್ಟು 2035 ಮಂದಿ ಸರಕಾರಿ ಹೈಸ್ಕೂಲುಗಳಲ್ಲಿ ಕಲಿತು ಪರೀಕ್ಷೆ ಬರೆದಿದ್ದರು. ಈ ಪೈಕಿ 980 ಹುಡುಗರು ಮತ್ತು 1055 ಹುಡುಗಿಯರು. ಅವರಲ್ಲಿ 1583 ಮಂದಿ ತೇರ್ಗಡೆಯಾಗಿದ್ದು, 904 ಹುಡುಗರು ಮತ್ತು 879 ಹುಡುಗಿಯರು ತೇರ್ಗಡೆ ಹೊಂದಿದ್ದಾರೆ.
ಯಶ್ವಿತ್ಸಾ 616:
ಬಂಟ್ವಾಳ ತಾಲೂಕಿನಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಂಟ್ವಾಳ ಎಸ್.ವಿ.ಎಸ್. ಹೈಸ್ಕೂಲಿನ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಯಶ್ವಿತ್ಸಾ 616 ಅಂಕಗಳನ್ನು ಗಳಿಸಿದ್ದು ಶಾಲೆಗೆ ಕೀರ್ತಿ ತಂದಿದ್ದಾಳೆ. ಈಕೆ ಇಡೀ ತಾಲೂಕಿನಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿನಿಯಾಗಿದ್ದಾಳೆ.
ಬಂಟ್ವಾಳ ತಾಲೂಕು