ರಜಾ ದಿನಗಳಲ್ಲಿ ಹೋಟೆಲ್ ಕ್ಲೀನಿಂಗ್ ಕೆಲಸವನ್ನು ಮಾಡುತ್ತಿದ್ದ ಈ ಹುಡುಗ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಟಾಪರ್ ಆಗಿದ್ದಾನೆ. ಈತ ಬಿ.ಮೂಡ ಗ್ರಾಮದ ಪದ್ಮನಾಭ ಮತ್ತು ಹೇಮಾವತಿ ದಂಪತಿ ಪುತ್ರ ಯತೀಶ್.
ಶಾಲಾ ರಜಾ ದಿನದಲ್ಲಿ ಬಿ.ಸಿ.ರೋಡಿನ ಮತ್ಸ್ಯಸಾಗರ ಹೊಟೇಲ್ ನಲ್ಲಿ ಕ್ಲಿನಿಂಗ್ ಕೆಲಸ ಮಾಡುತ್ತಿದ್ದ ಯತೀಶ್ ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ೫೯೦ ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡಗೊಳ್ಳುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾನೆ. ಯತೀಶ್ ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು ಕನ್ನಡ ೯೫,ಇಂಗ್ಲಿಷ್ ೯೩, ಹಿಂದಿ ೯೦, ವಿಜ್ಞಾನ೯೪, ಗಣಿತ ೯೭, ಸಮಾಜ ೯೬ ಅಂಕ ಗಳಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ಯತೀಶ್ ಸಾಧನೆಯನ್ನು ಗುರುತಿಸಿ ಬುಧವಾರ ಸಂಜೆ ಹೊಟೇಲ್ ಮಾಲಕ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ನಾರಾಯಣ ಪೆರ್ನೆ ಹೊಟೇಲ್ ನಲ್ಲಿ ಅಭಿನಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಟಿ. ಶೇಷಪ್ಪ ಮೂಲ್ಯ, ಪುರಸಭಾ ಸದಸ್ಯ ಹರಿಪ್ರಸಾದ್, ಕುಲಾಲ ಸುಧಾರಕ ಸಂಘದ ಮಾಜಿ ಅಧ್ಯಕ್ಷ ಸತೀಶ್ ಕುಲಾಲ್ ಹಾಗೂ ಹೊಟೇಲ್ ಸಿಬ್ಬಂದಿ ಈ ಸಂದರ್ಭ ಹಾಜರಿದ್ದರು.