ಮಳೆಗಾಲ ಆರಂಭವಾದ್ರೆ ಇಲ್ಲಿ ಏನಾಗಬಹುದು? ?

  • ಹರೀಶ ಮಾಂಬಾಡಿ

Just Look at this….

ಈ ಮಣ್ಣ ರಾಶಿ ಒಂದು ತಿಂಗಳಲ್ಲಿ ಖಾಲಿಯಾಗುತ್ತಾ, ಒಂದು ಮಳೆ ಬಂದರೆ ಇಲ್ಲಿನ ಸ್ಥಿತಿ ಹೇಗಿರಬಹುದು? ಇವರು ಮಳೆಗಾಲವನ್ನು ಹೇಗೆ ನಿಭಾಯಿಸುತ್ತಾರೆ?

ಜಾಹೀರಾತು

ಕಿಶೋರ್ ಪೆರಾಜೆ ಚಿತ್ರ

ಈ ಪ್ರಶ್ನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿಯಂತರರ ಬಳಿ ಕೇಳಿದರೆ, ನಸುನಕ್ಕು ನುಡಿಯುತ್ತಾರೆ. ಅವೆಲ್ಲಾ ಚಿಂತೆ ಇಲ್ಲ. ನೋಡಿ, ಅಲ್ಲಿ ಮಳೆಗಾಲದಲ್ಲಿ ಯಾವುದೇ ತೊಂದರೆಯಾಗದಂತೆ ನಾವು ನಿಭಾಯಿಸುತ್ತೇವೆ.

ಹೀಗೆಂದು ನಾವು ನಂಬುತ್ತಾ, ಮುಂದಿನ ಮಳೆಗಾಲ ಅಪಘಾತರಹಿತ, ಜನರಿಗೆ ತೊಂದರೆರಹಿತವಾಗಿರಲಿ ಎಂದು ಆಶಿಸೋಣ. ಅದಿರಲಿ, ಮಳೆಗಾಲದಲ್ಲಿ ಏನಾಗುತ್ತದೆ?

ಕಳೆದ ಎರಡು ವರ್ಷಗಳಿಂದ ಭಂಡಾರಿಬೆಟ್ಟು ಹೆದ್ದಾರಿ ಇಕ್ಕೆಲಗಳಲ್ಲಿ ಮಳೆಗಾಲದಲ್ಲಿ ಹೊಳೆಯಂತೆ ನೀರು ತುಂಬುತ್ತಿರುವುದನ್ನು ಧರ್ಮಸ್ಥಳ – ಮಂಗಳೂರು ಪ್ರಯಾಣಿಕರು ನೋಡಿರಬಹುದು. ಇದು ಈ ಬಾರಿ ಆಗುವುದಿಲ್ಲ ಎಂಬ ಗ್ಯಾರಂಟಿಯನ್ನು ಹೆದ್ದಾರಿ ಇಲಾಖೆ ಕೊಡುತ್ತಿದೆ. ಆದರೆ ಕಾಮಗಾರಿ ನಡೆಯುವ ಜಾಗದಲ್ಲಿ ಮಣ್ಣಿನ ರಾಶಿ ನೋಡುವಾಗ ಜಾರುವ ಮಣ್ಣಿನಲ್ಲಿ ದ್ವಿಚಕ್ರವನ್ನು ಓಡಿಸುವ ಕುರಿತು ಊಹಿಸಿದರೂ ಮೈಜುಮ್ಮೆನ್ನದಿರದು.!!

ಏನಿದು ಕಾಮಗಾರಿ?

ಸುಮಾರು 99 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿರುವ ಬಿ.ಸಿ.ರೋಡ್ – ಪುಂಜಾಲಕಟ್ಟೆ ರಸ್ತೆ ಅಗಲಗೊಳಿಸುವ ಕಾಮಗಾರಿ ಇದು.

ಬಿ.ಸಿ.ರೋಡಿನಿಂದ ಜಕ್ರಿಬೆಟ್ಟುವರೆಗೆ ಸುಮಾರು 4 ಕಿ.ಮೀ. ರಸ್ತೆಯಷ್ಟು ಕಾಂಕ್ರೀಟ್ ನೊಂದಿಗೆ ಚತುಷ್ಪಥ, ಬಳಿಕ ಅಲ್ಲಿಂದ ಪುಂಜಾಲಕಟ್ಟೆವರೆಗೆ ದ್ವಿಪಥ ಕೆಲಸಗಳು ಆರಂಭಗೊಂಡಿವೆ. ಇನ್ನು ಹದಿನೆಂಟು ತಿಂಗಳಲ್ಲಿ ಕೆಲಸಗಳನ್ನು ಮುಗಿಸುವ ಹೊಣೆಗಾರಿಕೆ ಇಲಾಖೆಗಿದೆ. ಖಾಸಗಿ ಗುತ್ತಿಗೆ ಕಂಪನಿಯು ಕಾಮಗಾರಿ ನಿರ್ವಹಿಸುತ್ತಿದ್ದು, ಬಿ.ಸಿ.ರೋಡಿನ ಭಂಡಾರಬೆಟ್ಟು, ಜಕ್ರಿಬೆಟ್ಟು ಕಡೆಗಳಲ್ಲೆಲ್ಲ ವೇಗವಾಗಿ ಕೆಲಸವಾಗುತ್ತಿದೆ.

ಬಂಟ್ವಾಳದಿಂದ ಮೂಡುಬಿದಿರೆಗೆ ತೆರಳುವ ರಸ್ತೆ, ಪುಂಜಾಲಕಟ್ಟೆ, ಧರ್ಮಸ್ಥಳ ಕಡೆಗೆ ತೆರಳುವ ರಸ್ತೆ, ಬಂಟ್ವಾಳ ಪೇಟೆಗೆ ಹೋಗುವುದು ಹಾಗೂ ಬಿ.ಸಿ.ರೋಡ್ ಕಡೆಗೆ ತೆರಳುವ ನಾಲ್ಕು ಮಾರ್ಗ ಕೂಡುವ ಅಗಲಕಿರಿದಾದ ಜಂಕ್ಷನ್ ಎಲ್ಲರಿಗೂ ತಲೆನೋವಾದ ವಿಚಾರ. ಇಲ್ಲಿ ಪೀಕ್ ಅವರ್ ನಲ್ಲಿ ಉದ್ದುದ್ದ ಕ್ಯೂ ನಿಲ್ಲುವುದು, ಅಪಘಾತಕ್ಕೆ ಎಡೆಮಾಡಿಕೊಡುವುದಲ್ಲದೆ, ವಾಹನ ಸವಾರರಷ್ಟೇ ಅಲ್ಲ, ಪಾದಚಾರಿಗಳಿಗೂ ತೊಂದರೆ ಆಗುತ್ತಿದೆ. ಎತ್ತಿನಗಾಡಿಗಷ್ಟೇ ಲಾಯಕ್ಕಾದ ರಸ್ತೆಯನ್ನು ಅಗಲಗೊಳಿಸಬೇಕು ಎಂಬ ಧ್ವನಿಗಳು ಬಹಳ ಹಿಂದೆಯೇ ಕೇಳಿಬರುತ್ತಿದ್ದರೂ ಹಲವು ಎಡರು ತೊಡರುಗಳಿಂದ ಸಾಧ್ಯವಾಗಿರಲಿಲ್ಲ. ಬಿ.ಸಿ.ರೋಡ್ – ಜಕ್ರಿಬೆಟ್ಟು ರಸ್ತೆಯನ್ನು ಸುಮಾರು 16 ಮೀಟರ್ ಅಗಲಗೊಳಿಸುವ ಯೋಜನೆ ಕಾರ್ಯರೂಪಕ್ಕೆ ಬಂದ ಬಳಿಕ ಈ ಸಮಸ್ಯೆಗೆ ಮುಕ್ತಿ ದೊರಕಬಹುದು ಎಂಬ ಆಶಾವಾದ ಇಲ್ಲಿ ನಿತ್ಯ ಸಂಚರಿಸುವ ಕಚೇರಿ, ಶಾಲೆ, ಕಾಲೇಜುಗಳ ನೂರಾರು ವಿದ್ಯಾರ್ಥಿಗಳು, ಪ್ರಯಾಣಿಕರಲ್ಲಿ ಮೂಡಿದೆ. ಈ ಕುರಿತು ಮಾತನಾಡಿದ ಅಧಿಕಾರಿಗಳು, ಈಗಾಗಲೇ ಭೂಮಿಯನ್ನು ವಶಕ್ಕೆ ಪಡೆಯುವ ಕೆಲಸಗಳು ನಡೆಯುತ್ತಿದ್ದು, ಅದಾದ ಕೂಡಲೇ ಜಂಕ್ಷನ್ ಅಭಿವೃದ್ಧಿ ಮಾಡಲಾಗುವುದು. ಜನರ ಸಮಸ್ಯೆಗಳಿಗೆ ಇದರಿಂದ ಮುಕ್ತಿ ದೊರಕಲಿದೆ ಎಂದರು.

ಸದ್ಯ ರಸ್ತೆ ವಿಸ್ತರಣೆ, ಸಮತಟ್ಟು ಮಾಡುವುದು, ಕಿರು ಸೇತುವೆ, ಮೋರಿ ರಿಪೇರಿ, ನಿರ್ಮಾಣ, ವಿಸ್ತರಣೆ, ವಿದ್ಯುತ್ ಕಂಬಗಳ ಸ್ಥಳಾಂತರ, ರಸ್ತೆ ಬದಿ ಇರುವ ಮರಗಳ ತೆರವು ಕೆಲಸಗಳು ನಡೆಯುತ್ತಿವೆ. ಇಡೀ ರಸ್ತೆ ಧೂಳಿನಿಂದ ಆವೃತವಾಗಿದ್ದರೆ, ಮಳೆಗಾಲಕ್ಕೆ ಮುನ್ನ ಒಂದು ಹಂತದ ಕೆಲಸವಾದರೂ ಮುಗಿಯದಿದ್ದರೆ ಕೆಸರಿನ ಸಮಸ್ಯೆ ಹಾಗೂ ಅಪಘಾತದ ಭೀತಿ ಈ ಭಾಗಕ್ಕೆ ಎದುರಾಗಲಿದೆ. ಆದರೆ ಅಧಿಕಾರಿಗಳ ಪ್ರಕಾರ, ಮಳೆಗಾಲದಲ್ಲಿ ಅಂಥ ಸಮಸ್ಯೆ ಬಾರದಂತೆ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲಾಗುವುದು.

ಮಳೆಗಾಲಕ್ಕೆ ಮೊದಲು ಭಂಡಾರಿಬೆಟ್ಟು ಮತ್ತು ಜಕ್ರಿಬೆಟ್ಟು ಮಣಿಹಳ್ಳದ ಕಿರು ಸೇತುವೆ ಕಾಮಗಾರಿ ಮುಕ್ತಾಯಗೊಳ್ಳಬೇಕು. ಅಲ್ಲಲ್ಲಿರುವ ಮೋರಿಗಳೂ ನಿರ್ಮಾಣ, ದುರಸ್ತಿಯಾಗಬೇಕು. ಮೇ ತಿಂಗಳೊಳಗೆ ಇಲ್ಲಿನ ಎರಡು ಸೇತುವೆಗಳು ಪೂರ್ಣಗೊಳ್ಳುವ ಭರವಸೆ ನಿರ್ಮಾಣಕಾರರಿಗೆ ಇದ್ದರೆ, ಮಳೆಗಾಲದೊಳಗೆ ಸ್ವಲ್ಪವಾದರೂ ಪೂರ್ಣಗೊಳ್ಳದೇ ಇದ್ದರೆ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.