ವಿಜಯಚಿತ್ರ, ರೂಪತಾರಾ ದಶಕಗಳ ಕಾಲ ಸಿನಿಮಾ ಪತ್ರಕರ್ತರಾಗಿ ಚೆನ್ನೈ, ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಉದಯ ಕುಮಾರ್ ಪೈ ಸದ್ಯ ಮಣಿಪಾಲದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಕನ್ನಡ ಸಿನಿಮಾದ ಬ್ಲ್ಯಾಕ್ ಅಂಡ್ ವೈಟ್ ಯುಗದಿಂದ ಇಂದಿನವರೆಗಿನ ಸಿನಿಮಾಗಳು, ನಟರ ಬದುಕನ್ನು ಹತ್ತಿರದಿಂದ ನೋಡಿರುವ ಅವರು ಡಾ. ರಾಜ್ ಕುಮಾರ್ ಕುರಿತು ಸರಣಿ ಬರೆಹಗಳನ್ನು ಬರೆದಿದ್ದಾರೆ. ಅದರ ಮೊದಲ ಕಂತು ಇಲ್ಲಿದೆ. ಅದಕ್ಕೆ ಅವರೇ ಇಟ್ಟ ಟೈಟಲ್ ನಾನು ನೋಡಿದ ರಾಜಕುಮಾರ. ಮುಂದೆ ಓದಿರಿ.
ಲೇಯ್, ಅಲ್ನೋಡಲೇ, ರಾಜಕುಮಾರ
ಹೀಗೆ ಹೇಳಿದರೆ, ಯಾರೇ ಆದರೂ ‘ಎಲ್ಲರೂ ಹೇಳಿ ಆಯಿತು, ಇವನದೊಂದು ಬಾಕಿ ಇತ್ತು’ ಎಂದು ಅಂದುಕೊಂಡರೆ ಅಚ್ಚರಿಪಡಲಾರೆ. ಸ್ವಯಂ ನನಗೇ ಹಾಗೆ ತೋರುತ್ತಿದೆ. ಮಾತ್ರವಲ್ಲ ರಾಜಕುಮಾರ ಬಗ್ಗೆ ಹೇಳಲು ನನಗಿರುವ ಅರ್ಹತೆಯಾದರೂ ಏನು ? ರಾಜಕುಮಾರ ಬಗ್ಗೆ ನಾನು ತಿಳಿದಿದ್ದಾದರೂ (ಅದೂ ಸರಿಯಾಗಿ) ಏನು ? ಎಂಬ ಸಂದೇಹ ನನಗೆ ಇದ್ದೇ ಇದೆ. ಏಕೆಂದರೆ ರಾಜಕುಮಾರ ಅವರಿಗೆ ನಿಕಟವಾದ, ಅವರನ್ನು ಚೆನ್ನಾಗಿ ಅರಿತ, ಕಾಲಕಾಲಕ್ಕೆ ವಿವಾದಗಳೆದ್ದಾಗ ಅವರೊಂದಿಗೆ ಸಂದರ್ಶನ-ಸಂವಾದ ನಡೆಸಿದ, ರಾಜಕುಮಾರ ಕುರಿತು ಪ್ರಕಟಿಸಬಹುದಾದ, ಪ್ರಕಟಿಸಬಾರದ ವಿಷಯಗಳನ್ನು ಚೆನ್ನಾಗಿ ಅರಿತವರು ನನಗೆ ನಿಕಟವಾಗಿದ್ದಾರೆ. ಇಂಥವರೆಲ್ಲ ಇರುವಾಗ ನಾನು ರಾಜಕುಮಾರ ಬಗ್ಗೆ ಹೇಳಿದರೆ, ಅಂಥ ತಿಳಿದವರು ‘ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು’ ಎಂಬ ದಾಸರ ಪದವನ್ನು ನನಗೆ ನೆನಪಿಸಿಕೊಟ್ಟರೆ ಖಂಡಿತವಾಗಿಯೂ ಅದು ತಪ್ಪಲ್ಲ. ಇಷ್ಟಿದ್ದೂ ಕೆಲವು ವಿಷಯಗಳನ್ನು ಪ್ರಸ್ತುತಪಡಿಸುವ ಅಧಿಕ ಪ್ರಸಂಗತನ ತೋರುತ್ತಿರುವುದನ್ನು ಕ್ಷಮಿಸುವಿರಾಗಿ ನಂಬಿದ್ದೇನೆ.
ನಾನು ರಾಜಕುಮಾರ ಅವರನ್ನು ಮೊದಲು ನೋಡಿದ್ದು ಯಾವಾಗ ಅಂದರೆ ಟೂರಿಂಗ್ ಟಾಕೀಸಿನಲ್ಲಿ ನಾಲ್ಕಾಣೆ ತಿಕೀಟು ಪಡೆದು ನೆಲದ ಮೇಲೆ ಕುಳಿತು ನೋಡಿದ ಸಿನಿಮಾದಲ್ಲಿ ಎಂದು ಹೇಳಿದರೆ ನಿಜವನ್ನೇ ಹೇಳುತ್ತಿದ್ದೇನೆಯೇ ಹೊರತು ಸುಳ್ಳನ್ನಲ್ಲ ಎಂದು ತಿಳಿಯಬೇಕು. ಯಾವ ಸಿನಿಮಾ ಎಂಬುದು ನೆನಪಿಲ್ಲ. ಆದರೂ ತೆರೆಯ ಆಚೆ, ಸಿನಿಮಾ ಕುರಿತ ಪ್ರಕಟವಾಗುವ ಸ್ಥಿರ ಚಿತ್ರಗಳ ಹೊರತಾಗಿ ನೋಡಿದ್ದಿದೆ. ಅಂಥ ನನ್ನ ಪಾಲಿನ ಸ್ವಾರಸ್ಯಕರ ಘಟನೆಗಳು ನನ್ನ ಮನಸ್ಸಿನಲ್ಲಿ ಇಂದಿಗೂ ಹಚ್ಚ ಹಸಿರಾಗಿವೆ.
‘ಭೂ ಕೈಲಾಸ’ ಚಿತ್ರದಲ್ಲಿ ರಾವಣನಾಗಿ ಅಭಿನಯಿಸಿದ ರಾಜಕುಮಾರ, ಆತ್ಮಲಿಂಗ ದರ್ಶನ ಮಾಡಿ ಮಹಾಬಲೇಶ್ವರನಿಗೆ ಸೇವೆ ಸಲ್ಲಿಸಲು ಗೋಕರ್ಣಕ್ಕೆ ಬಂದಿದ್ದರು. ಆಗ ನಾನಿನ್ನೂ ಚಿಕ್ಕ ಹುಡುಗ. ಹಾಗೆಂದು ನಮ್ಮ ಊರಿನಿಂದ ಗೋಕರ್ಣಕ್ಕೆ ಅವರನ್ನು ನೋಡಲು ಹೋಗಲಿಲ್ಲ. ಆದರೆ ನಮ್ಮ ಊರಿನ ಗೋವಿಂದ ಪ್ರಭು ಎಂಬವರೊಬ್ಬರು ಗೋಕರ್ಣಕ್ಕೆ ನೆಂಟರ ಮನೆಗೆಂದು ಹೋದವರು ಮರಳಿ ಊರಿಗೆ ಬಂದಾಗ ಹೊತ್ತು ತಂದ ಸುದ್ದಿ ಇದು. ಆಗ ನಮ್ಮ ಊರಿಗೆ (ಕೋಡಕಣಿ) ಸಾರಿಗೆ ಸಂಚಾರ ಇರಲಿಲ್ಲ. ಮಿರ್ಜಾನಿನಲ್ಲಿ ಇಳಿದು ನಡೆದು ಬರಬೇಕಾಗಿತ್ತು. ಹೀಗೆ ಮಿರ್ಜಾನಿನಲ್ಲಿ ಇಳಿದು ಬರುವಾಗ ದಾರಿಯಲ್ಲಿ ದೊರೆತ ಪರಿಚಿತರೊಂದಿಗೆ ಗೋವಿಂದ ಪ್ರಭುಗಳು ಮಿಕ್ಕ ವಿಷಯಗಳೊಂದಿಗೆ ಈ ಸುದ್ದಿಯನ್ನೂ ಬಿತ್ತರಿಸುತ್ತ ಬಂದರು. ಊರಿನಲ್ಲೂ ಹೇಳಿದರು. ಅವರು ಹೇಳಿದ ರೀತಿಯಲ್ಲೇ ಹೇಳುವುದಾದರೆ (ಕೊಂಕಣಿ ಹಾಗೂ ಕನ್ನಡ ಉಭಯ ಭಾಷೆಗಳಲ್ಲೂ) ‘ರಾಜಕುಮಾರ, ಮೊನ್ನೆ ಗೋಕರ್ಣಕ್ಕೆ ಪ್ರಸಾದ ಭಟ್ಟರ ಮನೆಗೆ ಬಂದಿದ್ದ. ನಿನ್ನೆ ವಾಪಸ್ ಹೋದ’ (ರಾಜಕುಮಾರು, ಪೈರಿ ಗೋಕರ್ಣಾಕ ಪ್ರಸಾದ ಭಟ್ಟಾಲೆ ಘರಾಕ ಆಯಿಲ್ರೆ, ಕಾಲಿ ವಾಪಸ್ ಗೆಲೊ) . ಇಂದಿನ ದಿನಗಳಲ್ಲಿ ಇದು ತಂಗಳು ಸುದ್ದಿ ಎನಿಸಿದರೂ, ಬೆಳಗಿನ ಪತ್ರಿಕೆಯನ್ನು (ಸಂಯುಕ್ತ ಕರ್ನಾಟಕ) ಸಾಯಂಕಾಲ ೭ ಗಂಟೆಗೆ ಕಂದೀಲು ಬೆಳಕಿನಲ್ಲಿ ಓದುವ, ಮರುದಿನ ಶಾಲೆಯಲ್ಲಿ ಪ್ರಾರ್ಥನೆ ಮುಗಿದ ಬಳಿಕ ಮೊದಲ ದಿನದ ಪತ್ರಿಕೆಯ ಮುಖ್ಯ ಶೀರ್ಷಿಕೆಗಳನ್ನು ಇಂದಿನ ತಾಜಾ ಸುದ್ದಿ ಎಂದು ಓದುವ ನಮಗೆ ಇದು ತಾಜಾ -ತಾಜಾ, ಗರ್ಮಾ ಗರಂ ಸುದ್ದಿಯಾಗಿತ್ತು. ‘ಹೌದಾ’ ಎಂದು ಉದ್ಗರಿಸಿದ್ದೆವು. ಜತೆಗೆ ಗೋವಿಂದ ಪ್ರಭು ಬಂಡಲ್ ಹೊಡೆದರಾ ಎಂದು ನಮ್ಮೊಳಗೆ ಗೊಣಗಿದ್ದೂ ಇದೆ. ಆದರೆ ಅಂದೇ ಸಾಯಂಕಾಲ ಊರಿನ ಜನರ ಕೈ ಸೇರಿದ ‘ಸಂಯುಕ್ತ ಕರ್ನಾಟಕ’ದಲ್ಲಿ ರಾಜಕುಮಾರ ಗೋಕರ್ಣಕ್ಕೆ ಬಂದ ಸುದ್ದಿ , ಚಿತ್ರಗಳ ಸಹಿತ ಪ್ರಕಟವಾಗಿತ್ತು. ದೇವಸ್ಥನಕ್ಕೆ ಹೋಗುವ, ಪ್ರಸಾದ ಭಟ್ಟರ ಮನೆಯಲ್ಲಿನ ಒಂದೆರಡು ಚಿತ್ರಗಳು ಪ್ರಕಟವಾಗಿದ್ದವು. ಅದರಲ್ಲಿ ಗಮನ ಸೆಳೆದದ್ದೆಂದರೆ ಊಟಕ್ಕೆ ಕುಳಿತ ರಾಜಕುಮಾರ ಕೈ ಮುಂದೆ ಹಿಡಿದು ತಿಳಿಸಾರು ಹಾಕಿಕೊಳ್ಳುವ ಚಿತ್ರ. ಗೋವಿಂದ ಪ್ರಭು ನಿಜವನ್ನೇ ಹೇಳಿದ್ದಾರೆ ಎಂಬುದು ನಮ್ಮ ಮಿತ್ರ ಮಂಡಳಿಗೆ ಮನದಟ್ಟಾಯಿತು. ಹಾಗೆಯೇ ಆ ಸಾರು ಮುರುಗಲ ಹಣ್ಣಿನ (ಪುನರ್ಪುಳಿ ಎಂದು ಹೇಳುವ) ಕಡಿ (ಸಾರು) ಎಂದು ತಿಳಿದು ಬಂದಿದ್ದು ದಶಕಗಳ ಬಳಿಕ. ಇದು ಸಂಶೋಧನೆ ಏನೂ ಅಲ್ಲ ಅಚಾನಕ್ ತಿಳಿದು ಬಂದ ವಿಷಯ.
‘ಕೆಟ್ಟು ಪಟ್ಟಣ ಸೇರು’ ಎಂದು ಹೇಳುವಂತೆ, ಬದುಕು ಕಟ್ಟಿಕೊಳ್ಳಲು ಸೇರಿದ ಊರು ಬೆಂಗಳೂರು. ಎಸ್ ಎಸ್ ಎಲ್ ಸಿ ಪದವೀಧರನಾದ ನನಗೆ ‘ಮಾಣಿ’ ಕೆಲಸ ಕಾದಿತ್ತು. ಕೆಂಗೇರಿ ಹೋಗುವ ರಸ್ತೆಯಲ್ಲಿರುವ ಶಿರಸಿ ಸರ್ಕಲ್ ನಲ್ಲಿದ್ದ ಜನತಾ ಹೊಟೇಲಿನಿಂದ ಸ್ವಯಂ ವರ್ಗಾವಣೆ ಪಡೆದು ಚಿಕ್ಕಪೇಟೆಯಲ್ಲಿರುವ ಕಾಮತ ಕೆಫೆಯಲ್ಲಿ ಸೇರಿಕೊಂಡಿದ್ದೆ. ಅಷ್ಟು ಹೊತ್ತಿಗಾಗಲೇ ಆಂಧ್ರ ಪ್ರದೇಶ ನೆರೆ ಹಾವಳಿಯಿಂದ ತತ್ತರಿಸಿತ್ತು. ನೆರೆಯಿಂದ ತತ್ತರಿಸಿದ ನೆರೆ ರಾಜ್ಯದ ಜನರ ನೆರವಿಗಾಗಿ ಕನ್ನಡ ಚಿತ್ರರಂಗ ರಾಜಕುಮಾರ ನೇತೃತ್ವದಲ್ಲಿ ನಿಧಿ ಸಂಗ್ರಹಕ್ಕಾಗಿ ಪಾದಯಾತ್ರೆ ನಡೆಸಿತು. ಆಗ ಚಿಕ್ಕಪೇಟೆಗೆ ಆಗಮಿಸಿದ ಪಾದಯಾತ್ರೆ ಕಾಮತ ಕೆಫೆಗೂ ಪಾದ ಬೆಳೆಸಿತು. ರಾಜಕುಮಾರ ಹಾಗೂ ಭಾರತಿ ಜೋಳಿಗೆ ಹಿಡಿದು ಬಂದಿದ್ದರು. ಹೊಟೇಲು ಮಾಲಕರು ನಿಧಿ ನೀಡಿದರು. ಜತೆಗೆ ನಿಧಿ ಸಂಗ್ರಹಿಸಲು ಬಂದವರಿಗೆ ಪೇಡಾ ನೀಡಿ ಬಾಯಿ ಸಿಹಿ ಮಾಡಿದರು. ರಾಜಕುಮಾರ (ಜತೆಗೆ ಭಾರತಿ) ಅವರನ್ನು ನಿಕಟವಾಗಿ ನೋಡಿದೆ. ಇದು ಮೊದಲ ಬಾರಿಗೆ ನೇರ ಹಾಗೂ ನಿಕಟವಾದ ರಾಜ ದರ್ಶನ.
‘ಕೆಟ್ಟು ಪಟ್ಟಣ ಸೇರು’ ಗಾದೆ ನನ್ನ ಬದುಕಿನಲ್ಲಿ ಪುನರಾವರ್ತನೆಯಾಯಿತು. ಈ ಬಾರಿ ಸೇರಿದ್ದು ಭಾಷೆಯೇ ತಿಳಿಯದ ಮದರಾಸು. ಅಲ್ಲಿಯೂ ‘ಮಾಣಿ’ಯ ಕೆಲಸವೇ ಗತಿ. ಅಲ್ಲಿ ನನಗೆ ನಾರಾಯಣ ಹಾಗೂ ಬಸವರಾಜು ಎಂಬ ಇಬ್ಬರು ಗೆಳೆಯರಾದರು. ನಾರಾಯಣ ಸ್ವಲ್ಪ ಸೀನಿಯರ್, ಅಂದರೆ ಅವನು ಮದರಾಸಿಗೆ ಬಂದು ಹತ್ತು ತಿಂಗಳಾಗಿತ್ತು. ಬಸವರಾಜು ಹದಿನೈದು ದಿನಗಳಾಗಿದ್ದವು. ಕನ್ನಡ ನಮ್ಮನ್ನು ಹತ್ತಿರ ಸೇರಿಸಿತ್ತು. ಹಾಗೆಂದು ತಮಿಳು ಕೆಲಸಗಾರರು ದೂರವಾಗಿರಲಿಲ್ಲ, ಸಂವಹನದ ತೊಡಕು ಅಷ್ಟೇ . ಉತ್ತರ ಕನ್ನಡ ಹಾಗೂ ಬೆಂಗಳೂರಿನಂಥ ತಂಪು ಪ್ರದೇಶಗಳಿಂದ ಹೋದ ನನಗೆ ಮದರಾಸಿನ ತಾಪಮಾನ ಮೈಯೆಲ್ಲ ಉರಿ ಎಬ್ಬಿಸಿತ್ತು. (ಅದು ಅಲ್ಲಿ ಎಲ್ಲರ ಅನುಭವ. ನನಗೆ ಎಂದೇನೂ ವಿಶೇಷವಾಗಿರಲಿಲ್ಲ. )ಹಾಗಾಗಿ ಹೊಟೇಲು ಮುಚ್ಚಿದ ಬಳಿಕ, ಗಾಳಿಗೆ ಮೈಯೊಡ್ಡಿ ಕುಳಿತುಕೊಳ್ಳಲು ಸಮೀಪದಲ್ಲಿರುವ ಮೈದಾನದಲ್ಲಿ ಮೂವರೂ ಕುಳಿತು (ಅಂಗಿ-ಬನಿಯನ್ ಬಿಚ್ಚಿ) ಅದೂ-ಇದೂ ಎಂದು ಹರಟೆ ಹೊಡೆಯುತ್ತಿದ್ದೆವು. ಆಗಾಗ ‘ಅವಚಿ ಕಾಯಿ’ ಎಂದು ಅಲ್ಲಿನವರು ಹೇಳುವ ಬೇಯಿಸಿದ ಕಳ್ಳೇಕಾಯಿ ಮೆಲ್ಲುತ್ತ, ಅಂದಿನ ದಿನದ ಅನುಭವಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಅದೊಂದು ದಿನ ಮಾಮೂಲಿನಂತೆ ಕಳ್ಳೇಕಾಯಿ ಮೆಲ್ಲುತ್ತ, ಹರಟೆ ಸಾಗಿತ್ತು. ರಾತ್ರಿ ೧೦.೩೦ ದಾಟಿತ್ತು. ಆಗ ಇದ್ದಕ್ಕಿದ್ದಂತೆ ಬಸವರಾಜು ‘ಲೇಯ್, ಅಲ್ನೋಡಲೇ, ರಾಜಕುಮಾರ ಬತ್ತಾ ಅವ್ನೆ’ ಎಂದು ಉದ್ಗರಿಸಿದ. ದೂರದಲ್ಲಿ ರೇಡಿಯೋ ಹಾಡು ಕೇಳಿಸುತ್ತಿದ್ದರೂ, ನೀರವ ರಾತ್ರಿಯಲ್ಲಿ ಬಸವರಾಜು ಉದ್ಗಾರ, ನಾವು ಕುಳಿತ ಉದ್ಯಾನದ ಗಡಿ ದಾಟಿ, ಪಕ್ಕದ ರಸ್ತೆಯ ಆಚೆಗೂ ಕೇಳಿತ್ತು. ರಸ್ತೆಗೆ ಬೆನ್ನು ಮಾಡಿ ಕುಳಿತ ನಾವಿಬ್ಬರೂ ಗಕ್ಕನೆ ಹಿಂದಿರುಗಿ ನೋಡಿದೆವು. ಬಸವರಾಜು ಸುಳ್ಳು ಹೇಳಿರಲಿಲ್ಲ. ರಾಜಕುಮಾರ ಜತೆಗೆ ಇನ್ನೂ ಮೂವರು ರಾತ್ರಿ ವಾಯುವಿಹಾರಕ್ಕೆ (ಉದ್ಯಾನಕ್ಕಲ್ಲ) ಬಂದಿದ್ದರು. ಆದರೆ ಈತನ ದನಿ ಕೇಳಿದ ರಾಜಕುಮಾರ ‘ಯಾರಪ್ಪಾ ಅದು, ರಾಜಕುಮಾರ ಅಂತ ಅಂದಿದ್ದು ?’ ಎಂದು ಉದ್ಯಾನದ ಸುತ್ತ ಹಾಕಿದ ಮೊಳ ಕಾಲೆತ್ತರದ ಪಾಗಾರು ಹಾರಿ ನಮ್ಮತ್ತ ಬರಲಾರಂಭಿಸಿದರು. ನಮಗೋ ಹೆದರಿಕೆ. ಏಕೆಂದರೆ ಎಂಥ ಪ್ರಸಿದ್ಧ ವ್ಯಕ್ತಿಯೇ ಆಗಲಿ, ನಮ್ಮ ನಮ್ಮೊಳಗೆ ಏಕವಚನ ಬಳಸುವುದು ರೂಢಿ. ಆದರೆ ಅಂಥ ವ್ಯಕ್ತಿಯ ಕಿವಿಗೆ ಬೀಳುವಂತೆ ಹೀಗೆ ಹೇಳಬಹುದೇ ? ಬಸವರಾಜು ಮಾಡಿದ ಕೆಲಸದಿಂದ ನಾವೆಲ್ಲ ಬೈಗುಳ ತಿನ್ನಬೇಕಾಗಿ ಬಂತಲ್ಲ ಎಂದು ಗಾಬರಿಯಾಗತೊಡಗಿತು. ಅಷ್ಟರಲ್ಲಿ ಸರಸರನೆ ಬಂದ ರಾಜಕುಮಾರ ‘ಏನಪ್ಪಾ ಯಾರು, ಎಲ್ಲಿಂದ ಬಂದಿದ್ದೀರಿ, ಯಾವೂರು ?’ ಎಂದು ಕೇಳುತ್ತ, ಮೇಲಕ್ಕೆತ್ತಿ ಕಟ್ಟಿದ ಪಂಚೆ ಕೆಳಗೆ ಬಿಟ್ಟು, ನೆಲದ ಮೇಲೆ ಪಟ್ಟಾಗಿ ಕುಳಿತೇ ಬಿಟ್ಟರು. ‘ಓ, ಕಳ್ಳೇ ಕಾಯಿ ನೈವೇದ್ಯ. ನಂಗೂ ಇಷ್ಟ’ ಎಂದು ಕಳ್ಳೆ ಕಾಯಿ ಒಡೆದು ತಿನ್ನಲಾರಂಭಿಸಿದರು. ‘ಹೂಂ ಜಮಾಯ್ಸಿ, ಜಮಾಯ್ಸಿ’ ಎಂದು ಹೇಳಿ , ನಮ್ಮ ಊರು, ಹೆಸರು,ಕೆಲಸ ಮಾಡುವ ಜಾಗ ಎಲ್ಲ ತಿಳಿದುಕೊಂಡರು. ಬಳಿಕ ‘ಒಳ್ಳೆಯದಾಗಲಿ, ಮುಂದುವರಿಸಿ. ಸ್ವಲ್ಪ ಅಡ್ಡಾಡಿ, ಮನೆಗೆ ಹೋಗುತ್ತೇನೆ. ಇದೇ ರಸ್ತೆಯ ಕೊನೆಯಲ್ಲಿ ನಮ್ಮ ಮನೆ’ ಎಂದು ಹೇಳಿ, ಹಾಗೆ ಬಂದು ಹೀಗೆ ಹೋದರು. ಒಟ್ಟು ಎರಡು-ಮೂರು ನಿಮಿಷ ಇರಬಹುದು ಅಷ್ಟೇ . ಬದುಕಿದೆಯಾ ಬಡ ಜೀವವೇ ಎಂಬಂತೆ ನಿಟ್ಟುಸಿರು ಬಿಟ್ಟೆವು. ಜತೆಗೆ ಬಸವರಾಜನಿಗೆ ‘ನಿನ್ನ ಬಾಯಿ ಬೊಂಬಾಯಿ ಮಾರಾಯಾ, ಸ್ವಲ್ಪ ನಿಧಾನವಾಗಿ ಮಾತನಾಡು’ ಎಂದು ಹೇಳಿದೆವು. ‘ನೋಡ್ರಯ್ಯಾ, ನಾನು ಹಂಗೆ ಹೇಳಿದ್ದಕ್ಕೇ ರಾಜಕುಮಾರ ಇಲ್ಲಿ ಗಂಟಾ ಬಂದಾ. ಇಲ್ದಿದ್ರೆ ಬತ್ತಾ ಇದ್ನಾ?’ಎಂದು ಜಂಬದಿಂದ ಹೇಳಿದ. ಏನೇ ಇರಲಿ ಈ ಅಯಾಚಿತ, ಅನಿರೀಕ್ಷಿತ ಭೇಟಿ ನಮ್ಮ ಮೂವರ ಪಾಲಿಗೆ ಒಂದು ಅವಿಸ್ಮರಣೀಯ ಘಟನೆ.
(ಮುಂದುವರಿಯುವುದು)