ಹಜಾಜ್ ಸಮೂಹ ಸಂಸ್ಥೆಗಳ ಸ್ಥಾಪಕರು, ಹಿರಿಯ ಸಾಹಿತಿ, ಕವಿ, ಸಾಮಾಜಿಕ, ಧಾರ್ಮಿಕ ಮುಖಂಡರಾದ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಗೋಳ್ತಮಜಲು ನಿವಾಸಿ ಹಾಜಿ ಜಿ. ಅಬ್ದುಲ್ ಖಾದರ್ (87) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಬೆಳಿಗ್ಗೆ 8 ಗಂಟೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಆರು ಗಂಡು, ಐದು ಹೆಣ್ಮಕ್ಕಳನ್ನು ಅಗಲಿದ್ದಾರೆ.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ದುಡಿದಿದ್ದಾರೆ. ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಹಜಾಜ್ ಉದ್ಯಮದ ಜೊತೆಗೆ ಸಾಮಾಜಿಕವಾಗಿಯೂ ತೊಡಗಿಸಿಕೊಂಡು ಬಡ, ಅಶಕ್ತರ ಶ್ರೇಯೋಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಕಲ್ಲಡ್ಕ ಜುಮಾ ಮಸೀದಿ ಹಾಗೂ ಗೋಳ್ತಮಜಲು ಜುಮಾ ಮಸೀದಿಯ ಅಭಿವೃದ್ಧಿಗೂ ವಿಶೇಷ ಕೊಡುಗೆ ನೀಡಿದ್ದಾರೆ. ಹಜಾಜ್ ಸಂಸ್ಥೆ ಮೂಲಕ ಫ್ಯಾಮಿಲಿ ಟ್ರಸ್ಟ್ ರಚಿಸಿ ಜೆಮ್ ಪಬ್ಲಿಕ್ ಸ್ಕೂಲ್ ಸ್ಥಾಪಿಸಿ ನಾಡಿನ ಸಾವಿರಾರು ಮಕ್ಕಳಿಗೆ ವಿಧ್ಯೆ ಒದಗಿಸುತ್ತಿದ್ದರು. ಗೋಳ್ತಮಜಲಿನಲ್ಲಿ ಸರಕಾರಿ ಪ್ರೌಢಶಾಲೆ ಪ್ರಾರಂಭಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಜಾತಿ ಧರ್ಮವಿಲ್ಲದೆ ನಾಡಿನ ಯುವಕರನ್ನು ಒಗ್ಗೂಡಿಸಿ ಹಜಾಜ್ ಸ್ಪೋರ್ಟ್ಸ್ ಕ್ಲಬ್ ಮೂಲಕ ಉಭಯ ರಾಜ್ಯಾದ್ಯಂತ ಕಬಡ್ಡಿ ಪಂದ್ಯಾಟದಲ್ಲಿ ಹಜಾಜ್ ಸ್ಪೋರ್ಟ್ಸ್ ಕ್ಲಬ್ ಖ್ಯಾತಿ ಪಡೆದಿದೆ. ನಾಡಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿ ಕರಾವಳಿ ಜಿಲ್ಲಾದ್ಯಂತ ಹೆಸರುವಾಸಿಯಾಗಿದ್ದರು.