ರಿಪ್ಪರ್ ಚಂದ್ರನ್!!!
ದಶಕಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ರಾತ್ರಿ ನಿದ್ದೆ ಮಾಡಲೂ ಬಿಡದಿದ್ದ ಹೆಸರು ಇದು. ರಿಪ್ಪರ್ ಮೂಲಕವೇ ಹಲವು ಕೊಲೆಗಳನ್ನು ಮಾಡಿದ್ದ ಚಂದ್ರನ್ ಅಂತ್ಯವೂ ಅಷ್ಟೇ ಆಸಕ್ತಿದಾಯಕ. ಒಂದು ಕಾಲದ ಬೆಚ್ಚಿಬೀಳಿಸುವ ಕ್ರೈಮ್ ಕಹಾನಿಯನ್ನು ನೆನಪಿಸಿ, ಮತ್ತೆ ಆ ಲೋಕಕ್ಕೆ ಒಯ್ಯುವ ಪ್ರಯತ್ನ ಮಾಡಲಿದ್ದಾರೆ ನಿರ್ದೇಶಕ ಕೃಷ್ಣ ಬೆಳ್ತಂಗಡಿ.
ಜಿ.ಕೆ. ರಿಯಲ್ ಇಮೇಜಸ್ ಲಾಂಛನದಲ್ಲಿ ಚಿತ್ರದ ಚಿತ್ರೀಕರಣ ಹಾಗೂ ಇತರ ಬಹುತೇಕ ಕೆಲಸಗಳು ಮುಕ್ತಾಯಗೊಂಡಿವೆ. ಇನ್ನೇನಿದ್ದರೂ ಸಿನಿಮಾ ನೋಡುವ ದಿನಕ್ಕೆ ಕಾಯೋದು.
ಜಿ.ಕೆ ರಿಯಲ್ ಇಮೇಜಸ್ ಲಾಂಛನದಲ್ಲಿ ಕೃಷ್ಣ ಬೆಳ್ತಂಗಡಿ ಮತ್ತು ಸ್ನೇಹಿತರು ನಿರ್ಮಾಣ ಮಾಡಿರುವ ‘ರಿಪ್ಪರ್’ಚಿತ್ರಕ್ಕೆ ಕೃಷ್ಣ ಬೆಳ್ತಂಗಡಿ ನಿರ್ದೇಶನ ಇದೆ. ಈ ಹಿಂದೆ ‘ಬಣ್ಣದ ಕೊಡೆ’ ಎಂಬ ಚಿತ್ರ ನಿರ್ದೇಶನ ಮಾಡಿ ಗಮನಸೆಳೆದಿದ್ದ ಕೃಷ್ಣ ಬೆಳ್ತಂಗಡಿ, ನಂತರ ಧಾರಾವಾಹಿಗಳಿಗೆ ಸಂಭಾಷಣಾಕಾರರಾಗಿ ಗುರುತಿಸಿಕೊಂಡಿದ್ದರು. ನೂರಕ್ಕೂ ಹೆಚ್ಚು ಜಾಹೀರಾತು ಚಿತ್ರ ಹಾಗೂ ನೂರ ಐವತ್ತಕ್ಕೂ ಹೆಚ್ಚು ಸಾಕ್ಷ್ಯ ಚಿತ್ರ ನಿರ್ದೇಶನ ಮಾಡಿರುವ ಕೃಷ್ಣ ಬೆಳ್ತಂಗಡಿ ಅವರು ತಮ್ಮ ಮೊದಲ ಚಿತ್ರದ ನಂತರ ಸುಮಾರು ನಾಲ್ಕು ವರ್ಷದ ಅಂತರದ ಬಳಿಕ ಮತ್ತೆ ‘ರಿಪ್ಪರ್’ಚಿತ್ರದ ಮೂಲಕ ಹಿರಿತೆರೆಗೆ ಹಿಂತಿರುಗಿದ್ದಾರೆ.
ಮಂಗಳೂರು, ಆಗುಂಬೆ ಪರಿಸರ ಮತ್ತು ಬೆಂಗಳೂರಿನ ಪರಿಸರದಲ್ಲಿ ಎರಡು ಹಂತದಲ್ಲಿ ಒಟ್ಟು 30 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಕನ್ನಡ ತಮಿಳು ನಟ ಹಾಗೂ ರಂಗಭೂಮಿ ಕಲಾವಿದ ಕೌಸ್ತುಭ್ ಜಯಕುಮಾರ್ ದರೋಡೆಕೋರನ ಪಾತ್ರದಲ್ಲಿ ನಟಿಸಿದ್ದು, ಇವರಿಗೆ ಮುಂಬಯಿಯ ಬೆಡಗಿ ಅಮುಲ್ ಗೌಡ ಸಾಥ್ ನೀಡಿದ್ದಾರೆ. ನಾಯಕನ ಪಾತ್ರದಲ್ಲಿ ರಾಧಾರಮಣ ಧಾರಾವಾಹಿಯ ಸುಮೇದು ಖ್ಯಾತಿಯ ಶ್ರೀರಾಮ್, ನಾಯಕಿಯಾಗಿ ಕೊಡಗಿನ ಬೆಡಗಿ ಸಾನ್ವಿ ನಟಿಸಿದ್ದಾರೆ. ಉಳಿದಂತೆ ತಾರಾಗಣದಲ್ಲಿ ಸಿನಿಮಾ ಹಾಗೂ ದಾರಾವಾಹಿಗಳ ಬಹುತೇಕ ಪ್ರಮುಖ ಕಲಾವಿದರು ನಟಿಸಿದ್ದು, ಇದೀಗ ಎಡಿಟಿಂಗ್ ಶುರು ಆಗುವ ಮೂಲಕ ಪ್ರೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರಕ್ಕೆ ಅನಿಲ್ಕುಮಾರ್ ಛಾಯಾಗ್ರಹಣವಿದ್ದು, ಮಂಜುನಾಥ ಹುಣಸೂರು, ಪ್ರಭಾಕರ ಪ್ರಭು ಹಾಗೂ ಅರ್ಪಿತಾ ಮೈಸೂರು ಇವರ ಸಹ ನಿರ್ದೇಶನವಿದೆ. ಹಿತನ್ ಹಾಸನ್ ಸಂಗೀತ, ಮುಕ್ತರಾಜು ಅವರ ಸಂಕಲನ ಈ ಚಿತ್ರಕ್ಕಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 60-70 ವಯಸ್ಸಿನವರಿಗಂತೂ ಚಂದ್ರನ್ ಹೆಸರು ನೆನಪಿರುತ್ತದೆ. ಆತನ ಕಥೆಯ ಅನಾವರಣಕ್ಕಾಗಿ ಕೃಷ್ಣ ಬೆಳ್ತಂಗಡಿ ಸಾಕಷ್ಟು ಹೋಂ ವರ್ಕ್ ಮಾಡಿದ್ದಾರೆ. ಹಲವು ಪೊಲೀಸ್ ಅಧಿಕಾರಿಗಳು, ಆ ಕಾಲದಲ್ಲಿ ಚಂದ್ರನ್ ಪ್ರಕರಣ ನಿರ್ವಹಿಸುತ್ತಿದ್ದ ಅಧಿಕಾರಿಗಳ ಸಂಪರ್ಕ, ಸಂದರ್ಶನದ ಬಳಿಕ ಸುಂದರ ಚಿತ್ರ ಹೊರಬರಲಿದೆ.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127