ವಂಚಕರನ್ನು ಈ ಚೌಕೀದಾರ್ ಬಿಡೋದಿಲ್ಲ, ಎಲ್ಲಿದ್ದರೂ ಹುಡುಕಿ ತರ್ತಾನೆ: ಮಂಗಳೂರಲ್ಲಿ ಮೋದಿ

ಐದು ವರ್ಷಗಳಲ್ಲಿ ಮೋದಿ ಏನು ಮಾಡಿದ್ದಾರೆ? ಎಂದು ಪ್ರತಿಪಕ್ಷಗಳು, ‘ಮಹಾ ಮಿಲಾವಟಿಗಳು ಕೇಳುತ್ತಾರೆ. ವಂಚಕರಿಗೆ, ಭ್ರಷ್ಟರಿಗೆ, ಮಧ್ಯವರ್ತಿಗಳಿಗೆ ಆಡಳಿತದಲ್ಲಿ ಅವಕಾಶವಿಲ್ಲದಂತೆ ಮೋದಿ ಮಾಡಿದ್ದಾನೆ. ದೇಶದ ಬೊಕ್ಕಸಕ್ಕೆ ವಂಚಿಸಿದವರನ್ನು ಎಲ್ಲಿದ್ದರೂ ಹುಡುಕಿ ತಂದು ಕಾನೂನಿನಂತೆ ಶಿಕ್ಷೆಗೆ ಗುರಿಪಡಿಸಲು ಮೋದಿ ಸರಕಾರ ಬದ್ಧವಾಗಿದೆ ಅವರದ್ದು ವಂಶೋದಯವಾದರೆ, ನಮ್ಮದು ಅಂತ್ಯೋದಯ ರಾಜಕಾರಣ, 21ನೇ ಶತಮಾನದ ಬಳಿಕ ನವಭಾರತದ ಚಹರೆ ಹೇಗಿರಬೇಕು ಎಂಬುದನ್ನು ನಿರ್ಧರಿಸಲು 2019ರ ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಜಾಹೀರಾತು

ಮಂಗಳೂರಿನಲ್ಲಿ ಶನಿವಾರ ಸಂಜೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳೂರಿನ ವಿಮಾನ ನಿಲ್ದಾಣದಿಂದ ನಾನು ಕೇಂದ್ರ ಮೈದಾನಕ್ಕೆ ಬರುವ ದೊಡ್ಡ ದಾರಿಯ ಇಕ್ಕೆಲಗಳಲ್ಲಿ ಮಾನವ ಸರಪಳಿಯಲ್ಲ, ಮಾನವ ಗೋಡೆಯೇ ಕಂಡುಬಂದಿತ್ತು. ಇಷ್ಟೊಂದು ಜನ ಇಲ್ಲಿರಬೇಕಾದರೆ, ಮೈದಾನದಲ್ಲಿ ಯಾರಿರಬಹುದು ಎಂದು ಊಹಿಸಿದರೆ, ಇಲ್ಲಿ ಜನಸಾಗರವೇ ತುಂಬಿದೆ ಎಂದು ಕರತಾಡಣದ ಮಧ್ಯೆ ಹೇಳಿದ ಅವರು, ಮರದ ಮೇಲೆ ನಿಂತು ನೋಡುವವರಿಗೂ ಕೈಬೀಸಿ, ಕೆಳಗಿಳಿದು ನೋಡುವಂತೆ ಕರೆ ನೀಡಿದರು.

ಇಡೀ ಮಂಗಳೂರು ನಗರ ಕೇಸರಿಮಯವಾಗಿದ್ದು ಜನರ ಪ್ರೀತಿಗೆ ನಾನು ಆಭಾರಿ ಎಂದು ಹೇಳಿದರು. ವಿಶ್ವ ವೇದಿಕೆಯಲ್ಲಿ ಭಾರತದ ಧ್ವನಿ ಗಟ್ಟಿಗೊಳ್ಳುತ್ತಿದ್ದು, ಇದಕ್ಕೆ ಪ್ರತಿಯೊಬ್ಬ ಮತದಾರನಿಗೂ ಧನ್ಯವಾದ ಅರ್ಪಿಸುವುದಾಗಿ ಪ್ರಧಾನಿ ಮೋದಿ ಹೇಳಿದರು.

ಇತ್ತೀಚೆಗಷ್ಟೇ ನಮ್ಮ ಅಸೆಂಬ್ಲಿ ಚುನಾವಣೆ ಆಯಿತು. ಸ್ವಲ್ಪ ಕಡಿಮೆ ಸೀಟು ದೊರಕಿತು. ಏನಾಯಿತು? ಪೂರಾ ಕರ್ನಾಟಕ ಬರ್ಬಾದ್ ಆಯಿತು. ಸಣ್ಣ ತಪ್ಪು ಎಷ್ಟು ದೊಡ್ಡ ನಷ್ಟ ಮಾಡುತ್ತದೆ ನೋಡಿ. ಕರ್ನಾಟಕ ಇಂಥ ನಷ್ಟ ಹೊಂದಬೇಕೇನು, ಹಿಂದಿನ ಬಾರಿ ಕಡಿಮೆಯಾದದ್ದನ್ನು ತುಂಬಬೇಕಲ್ವೇ ಎಂದು ಮೋದಿ ಹೇಳಿದರು.

ಭಾರತದಲ್ಲಿ ಮಾತ್ರವಲ್ಲ, ಇಂಗ್ಲೆಂಡ್, ಅಮೆರಿಕ, ರಷ್ಯಾ ಎಲ್ಲೆಡೆ ಜಯಘೋಷ ಮೊಳಗುತ್ತಿದೆ. ಏಕೆ? ಇದು ಮೋದಿಯ ಕಾರಣಕ್ಕೆ ಅಲ್ಲ. ನಿಮ್ಮ ಒಂದು ಮತದ ಕಾರಣಕ್ಕೆ. 2014ರಲ್ಲಿ ನೀವು ನನಗೆ ಆಶೀರ್ವಾದ ಮಾಡಿದ್ದೀರಿ. ನೀವು ನೀಡಿದ ಶಕ್ತಿಯಿಂದಾಗಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಯಿತು. ಹೀಗಾಗಿ ನಿಮಗೆ ತಲೆಬಾಗಿ ನಮಿಸಲು ಬಂದಿದ್ದೇನೆ” ಎಂದು ಮೋದಿ ನುಡಿದರು.

ನಮ್ಮ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆಯಿದೆ. ಅವರ ವಂಶೋದಯದಲ್ಲಿ ಯಾವ ಪಾರದರ್ಶಕತೆಯೂ ಇಲ್ಲ. ನಮ್ಮ ಅಂತ್ಯೋದಯವಾದಲ್ಲಿ ಚಹಾ ಮಾರುವವನೂ ಪ್ರಧಾನಿಯಾಗುತ್ತಾನೆ. ಅವರ ವಂಶೋದಯದಲ್ಲಿ ಯಾವ ಅರ್ಹತೆಯಿಲ್ಲದವನೂ ವಂಶದ ಹೆಸರು ಹೇಳಿಕೊಂಡು ಉನ್ನತ ಹುದ್ದೆಗೆ ತಾನು ಅರ್ಹ ಎಂದು ಭಾವಿಸಿಕೊಳ್ಳುತ್ತಾನೆ ಎಂದು ಮೋದಿ ಹೇಳಿದರು.

ನಮ್ಮ ಆಡಳಿತದಲ್ಲಿ ದೇಶದಲ್ಲಿ ನವ ಮಧ್ಯಮ ವರ್ಗ ನಿರ್ಮಾಣವಾಗಿದೆ. ಅವರ ವಂಶೋದಯದಲ್ಲಿ ಮಧ್ಯವರ್ತಿಗಳು ಮತ್ತು ಅವರ ಕುಟುಂಬಗಳು ಮಾತ್ರ ಉದ್ಧಾರವಾಗಿವೆ ಎಂದು ಮೋದಿ ಹೇಳಿದರು.

ರಾಜ್ಯದ ಕಾಂಗ್ರೆಸ್-ಜೆಡಿಎಸ್ ಪರಿವಾರವಾದದ ರಾಜಕಾರಣ ಮಾಡಿದರೆ, ಬಿಜೆಪಿ ರಾಷ್ಟ್ರವಾದದ ರಾಜಕಾರಣ ಮಾಡುತ್ತದೆ ಎಂದು ಮೈತ್ರಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಮೋದಿ, ಕುಟುಂಬ ಸದಸ್ಯರನ್ನೆಲ್ಲಾ ಚುನಾವಣೆಗೆ ನಿಲ್ಲಿಸಿರುವ ಕಾಂಗ್ರೆಸ್-ಜೆಡಿಎಸ್ ಗೆ , ಓರ್ವ ಚಾಯ್ ವಾಲಾ ಪ್ರಧಾನಿಯಾಗಿರುವುದನ್ನು ನೋಡಲಾಗುತ್ತಿಲ್ಲ ಎಂದು ಟೀಕಿಸಿದರು.

ಬಿಜೆಪಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಡಿಪಾಯದ ಮೇಲೆ ರಾಜಕಾರಣ ಮಾಡುತ್ತದೆ ಎಂದ ಅವರು, 2019ರಲ್ಲಿ ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರ ರಚಿಸಿದ ಬಳಿಕ ಮೀನುಗಾರಿಕೆ ಮತ್ತು ಮೀನುಗಾರರ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯವನ್ನು ತೆರೆಯುವುದಾಗಿ ಭರವಸೆ ನೀಡಿದರು.

ದ.ಕ, ಉಡುಪಿ ಅಭ್ಯರ್ಥಿಗಳಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಶಾಸಕರಾದ ವೈ. ಭರತ್ ಶೆಟ್ಟಿ, ಸುನೀಲ್ ಕುಮಾರ್, ರಾಜೇಶ್ ನಾಯ್ಕ್, ಹರೀಶ್ ಪೂಂಜ, ಸಂಜೀವ ಮಠಂದೂರು, ಅಂಗಾರ, ಉಮಾನಾಥ ಕೋಟ್ಯಾನ್, ಸಿ.ಟಿ.ರವಿ, ವೇದವ್ಯಾಸ ಕಾಮತ್ ಸಹಿತ ಪಕ್ಷ ಪ್ರಮುಖರು ಉಪಸ್ಥಿತರಿದ್ದರು.


ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.