ಕಾಲೇಜು ರಂಗದಿಂದ ಜೀವನ ರಂಗಕ್ಕೆ ಪ್ರವೇಶಿಸುತ್ತಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳನ್ನು ಸಮಸ್ಯೆಗಳನ್ನು ಗುರು ಹಿರಿಯರ ಮಾರ್ಗದರ್ಶನದೊಂದಿಗೆ ಪರಿಹರಿಸಿದರೆ, ಜೀವನ ರಂಗದಲ್ಲಿ ಸ್ವತಃ ಬಗೆಹರಿಸಿಕೊಳ್ಳಬೇಕು. ಇದಕ್ಕೆ ಪೂರಕವಾದ ಆತ್ಮಸ್ಥೈರ್ಯ ವಿದ್ಯಾರ್ಥಿ ಜೀವನದಲ್ಲೇ ಗಳಿಸಿಕೊಳ್ಳಬೇಕು ಎಂದು ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ. ಎಸ್. ಹೇಳಿದರು.
ಅವರು ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ 2018-19ನೇ ಸಾಲಿನ ದೀಪಪ್ರದಾನ ಕಾರ್ಯಕ್ರಮ ಪದವಿ ವಿಭಾಗದ 8ನೇ ತಂಡದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾಥಿಗಳು ದೀಪ ಪಡೆಯುವುದರ ಮೂಲಕ ತಮ್ಮ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಒಂದು ಸುಂದರವಾದ ಹಾಗೂ ಭಾವನಾತ್ಮಕ ಕಾರ್ಯಕ್ರಮ ಇದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಜಗತ್ತಿನ ಯಾವುದೇ ಮೂಲೆಗೂ ಹೋದರೂ ಎಲ್ಲರಿಗೂ ಒಳ್ಳೆಯದನ್ನೇ ಮಾಡುವ ಮನೋಭಾವ ಹೊಂದಿರುವ ಭಾರತೀಯರ ಹೆಜ್ಜೆ ಗುರುತೇ ಇಂತಹ ಸಕಾರಾತ್ಮಕ ಭಾವನೆಯೇ ನಮ್ಮ ರಕ್ತದಲ್ಲಿಯೇ ಸೇರಿಕೊಂಡಿದೆ. ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡುವ ಪ್ರಯತ್ನ ಮಾಡುತ್ತಾ ಬಂದಿದೆ ಎಂದರು.
ಮುಖ್ಯ ಅತಿಥಿಗಳಾಗಿ, ಎನ್. ಐ.ಟಿ.ಕೆ. ಸುರತ್ಕಲ್‌ನ ಆಡಳಿತ ನಿರ್ದೇಶಕ ಡಾ| ಕೆ. ಬಲವೀರ ರೆಡ್ಡಿ, ಚೆನ್ನೈನ ವಿಕ್ರಾಂತ್ ಕೆಮಿಕಲ್ ಕಾರ್ಪೋರೇಶನ್ ಪ್ರೈ. ಲಿ. ಆಡಳಿತ ನಿರ್ದೇಶಕ ಬಿ. ಜಿ. ಕಾರಂತ್, ಕರ್ನಾಟಕ ರಾಜ್ಯ ಸಾವಿತ್ರಿ ಭಾಯಿಪುಲೆ ಶಿಕ್ಷಕಿಯರ ಸಂಘ ಧಾರಾವಾಡದ ರಾಜ್ಯಾಧ್ಯಕ್ಷ ಲತಾ ಮುಳ್ಳೂರು ಆಗಮಿಸಿದ್ದರು.
ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ರಾಷ್ಟ್ರ ಸೇವಿಕಾ ಸಮಿತಿ ಪ್ರಾಂತ ಕಾರ್‍ಯಕಾರಿಣಿ ಸದಸ್ಯೆ ಡಾ. ಕಮಲಾ ಪ್ರಭಾಕರ ಭಟ್, ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕ ರಮೇಶ್ ಎನ್. ಉಪಸ್ಥಿತರಿದ್ದರು.
ಅಂತಿಮ ವರ್ಷದ ವಿದ್ಯಾರ್ಥಿಗಳು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ದೀಪವನ್ನು ಹಸ್ತಾಂತರಿಸಿ ತಮ್ಮ ಮೂರು ವರ್ಷಗಳ ವಿದ್ಯಾರ್ಥಿ ಜೀವನದ ನೋವು – ನಲಿವುಗಳನ್ನು ಹಂಚಿಕೊಂಡರು. ಹಾಗೆಯೇ ಅವರ ಸವಿ ನೆನಪಿಗಾಗಿ ಕಾಲೇಜಿಗೆ ಕೊಡುಗೆಯನ್ನು ನೀಡಿದರು.
ಇದೇ ಸಂದರ್ಭ ಕಾಲೇಜಿನ ವಾರ್ಷಿಕ ಸಂಚಿಕೆ ರಾಮಧ್ವನಿ ಬಿಡುಗಡೆಗೊಳಿಸಲಾಯಿತು. ಪದವಿ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಸ್ವಾಗತಿಸಿ, ವಿದ್ಯಾರ್ಥಿಗಳಾದ ವರ್ಷಿಣಿ ವಂದಿಸಿ, ಭವಾನಿ, ಸುಭಾಷಿಣಿ ಕಾರ್ಯಕ್ರಮ ನಿರೂಪಿಸಿದರು.
____________________________________________________________________________________________________
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127