ನಿಮಗೆ ‘ಕಂಡುಕೊಂಡೇನ್ ಕಂಡುಕೊಂಡೇನ್’ ಅನ್ನುವ ಸಿನಿಮಾ ನೆನಪಿದೆಯಾ? ಮಮ್ಮೂಟ್ಟಿ, ಅಜಿತ್,ಐಶ್ವರ್ಯ ರೈ,ತಬು ನಟನೆಯ ಸಿನಿಮಾ..ತನ್ನ ಹಾಡುಗಳಿಂದಲೂ ತಟ್ಟುವ ಕಥೆಯಿಂದಲೂ ಮನಗೆದ್ದಿತ್ತು.
ಅದರ ನಿರ್ದೇಶಕ ರಾಜೀವ್ ಮೆನನ್ ಮತ್ತೆ ಬಂದಿದ್ದಾರೆ. ಇದೂ ಸಂಗೀತ ಪ್ರಧಾನ ಸಿನಿಮಾವೇ. ರೆಹಮಾನ್ ಸಂಗೀತ ಅಂದ ಮೇಲೆ ಕೇಳಬೇಕೇ? ಅದ್ಭುತವಾದ ಹಿನ್ನೆಲೆ ಸಂಗೀತ..
ತೊಂಬತ್ತರ ದಶಕದಲ್ಲಿ ಇಂತಹ ಸಿನಿಮಾಗಳು ತುಂಬಾ ಬಂದಿತ್ತು. ಪ್ರಖ್ಯಾತ ಸಂಗೀತ ಜ್ಞಾನಿ ಗುರು, ಏತಕ್ಕೂ ಬೇಡದ ಶಿಷ್ಯ,ಯಾರದೋ ವೈರತ್ವ ಕಟ್ಟಿಕೊಂಡು ಗುರು ಇವನ ದೊಡ್ಡ ಜನ ಮಾಡುವ ಕಥೆ.. ಅದೇ ಫ್ಲೇವರ್.. ಆದರೆ ಇಲ್ಲಿ ಕಥೆ ಕೊಂಚ ಬದಲಾಗಿದೆ..
ಇತ್ತೀಚೆಗೆ ತಮಿಳು ಸಿನಿಮಾಗಳಲ್ಲಿ ಮೇಲು ಜಾತಿಯಿಂದ ಕೀಳು ಜಾತಿಯ ಶೋಷಣೆ ಎಂಬ ಒಂದು ವಿಷಯವನ್ನು ದೊಡ್ಡದಾಗಿ ಹೇಳದೆ ಆದರೆ ನೋಡುವವನಿಗೆ ಓಹ್ಹೋ ಹಿಂಗಾ ವಿಷಯ ಅನ್ನುವ ಹಾಗೆ ಮಾಡುವ ಸುಮಾರು ಸಿನಿಮಾಗಳು ಬಂದಿವೆ(ಪರಿಯೇರುಮ್ ಪೆರುಮಾಳ್ ಇತ್ಯಾದಿ) ಅದನ್ನೂ ಇಟ್ಟುಕೊಂಡು ಒಳ್ಳೆಯದು ಅನ್ನಬಹುದಾದ ಕಥೆ ಹೆಣೆದಿದ್ದಾರೆ. ನಟ ವಿಜಯ್ನ ದೊಡ್ಡ ಅಭಿಮಾನಿ ನಾಯಕ, ಅವನ ಅಪ್ಪ ಮೃದಂಗ ತಯಾರು ಮಾಡುವವ..ಖ್ಯಾತ ಮೃದಂಗ ವಾದಕ ವೇಲು ಅಯ್ಯರ್(ನೆಡುಮುಡಿ ವೇಣು) ಅವರ ಕಾರ್ಯಕ್ರಮಕ್ಕೆ ಅಕಸ್ಮಾತ್ ಆಗಿ ತಂದೆಯ ಬದಲು ಮೃದಂಗ ಕೊಡಲು ಹೋದ ನಾಯಕ (ಜಿ.ವಿ.ಪ್ರಕಾಶ್) ಆ ನಾದಕ್ಕೆ ಸೋತು ಹೋಗುತ್ತಾನೆ.
ಅನೇಕ ಯತ್ನಗಳ ನಂತರ ಅವನಿಗೆ ಕಲಿಸಲು ಗುರು ಸಮ್ಮತಿಸುತ್ತಾರೆ. ಕೀಳು ಜಾತಿಯ ಅವನ ಒಳ ಬಿಟ್ಟುಕೊಂಡು ಅವರ ಮುಖ್ಯ ಶಿಷ್ಯನಿಗೆ ಹಿಡಿಸುವುದಿಲ್ಲ. ಹಾಗೆ ಸಾಗುವ ಕಥೆ ಕಲಹಕ್ಕೆ ಕಾರಣವಾಗುತ್ತದೆ. ರಿಯಾಲಿಟಿ ಷೋ ಒಂದರಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಬೇಕಾದ ಅನಿವಾರ್ಯತೆಗೆ ನಾಯಕ ಸಿಕ್ಕಿಬೀಳುತ್ತಾನೆ.ಗೆಲ್ಲುತ್ತಾನಾ? ಗೆದ್ದರೂ ಅದು ನಿಜವಾದ ಗೆಲುವಾ ಎಂಬುದೇ ಕಥೆ..
ಇಂತಹ ಸಿನಿಮಾಗಳಲ್ಲಿ ಹಿನ್ನೆಲೆ ಸಂಗೀತ ಚೆನ್ನಾಗಿರಬೇಕು ಇಲ್ಲವಾದರೆ ಸಿನಿಮಾ ಆತ್ಮವಿಲ್ಲದೆ ಸೊರಗುತ್ತದೆ.ಆದರೆ ರೆಹಮಾನ್ ಇರುವಾಗ ಆ ತಲೆ ಬಿಸಿ ಇಲ್ಲ. ನೆಡುಮುಡಿ ವೇಣು ಆ ಪಾತ್ರ ಹೇಗೆ ಅಭಿನಯಿಸಿದ್ದಾರೆ ಅಂದರೆ ಅವರ ಮತ್ತು ಮೋಹನ್ ಲಾಲ್ ಜೋಡಿಯ ಭರತಂ ನೆನಪಾಗುತ್ತದೆ.
ಮೃದಂಗ ಕಲಿಸುವ ದೃಶ್ಯಗಳ ಸೊಗಸೇ ಬೇರೆ.. ಆದರೆ ಅಲ್ಲಲ್ಲಿ ತುಂಡಾದಂತೆ ಭಾಸವಾಗುವ ಕಥೆ, ಅದಲ್ಲದೆ ಕೆಲವೊಮ್ಮೆ ಟೆಲಿಫಿಲ್ಮ್ ನೋಡುವ ಹಾಗೆ ಭಾಸವಾಗುತ್ತದೆ. ಅಂದ ಹಾಗೆ ಟಿ.ಎನ್. ಕೃಷ್ಣ ಹೋಲುವ ಪಾತ್ರವೊಂದಿದೆ ಹಾಗಾಗಿ ಸಿನಿಮಾ ಸಮಕಾಲೀನ ಚರ್ಚೆಯಾದ ‘ಶುದ್ಧ ಕರ್ನಾಟಿಕ್ ಸಂಗೀತ’ ವನ್ನೂ ಒಳಗೊಳ್ಳುತ್ತದೆ. ಒಟ್ಟಂದದಲ್ಲಿ ತಾನು ಏನನ್ನು ಹೇಳಹೊರಟಿದ್ದಾರೋ ಅದನ್ನು ಕಟ್ಟಿಕೊಡುವಲ್ಲಿ ನಿರ್ದೇಶಕ ಯಶಸ್ವಿ. ಸಿನಿಮಾ ಮುಗಿದ ಮೇಲೆ ರೆಹಮಾನ್ ಸಂಗೀತ ಮತ್ತು ನೆಡುಮುಡಿ ವೇಣು ಅಭಿನಯ ನೆನಪಲ್ಲಿ ಉಳಿಯುತ್ತದೆ.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127