ದೇಶ ಹಾಳಾಗಲು 60 ವರ್ಷಗಳ ಕಾಂಗ್ರೆಸ್ ಆಡಳಿತ ಕಾರಣ ಎಂದು ಬಿಜೆಪಿ ಮತ್ತದರ ಬೆಂಬಲಿಗರು ಹೇಳುತ್ತಾ ಬಂದಿರುವುದೇ ಸುಳ್ಳಿನ ಕಂತೆ. ಅಸಲಿಗೆ ಕಾಂಗ್ರೆಸ್ ಅವಧಿಯಲ್ಲಿ ಸಾಕ್ಷರತೆ, ಬಡ ಜನರಿಗೆ ಅನ್ನಭಾಗ್ಯ, ಬೆಳಕು, ಮನೆಗಳು ದೊರಕಿದವು. ದೊಡ್ಡ ಯೋಜನೆಗಳು ಬಂದವು. ಹಗರಣಗಳ ಬಗ್ಗೆ ಮಾತನಾಡುವ ನರೇಂದ್ರ ಮೋದಿ ನೇತೃತ್ವದ ಸರಕಾರದಿಂದ ಜನರು ಕೇವಲ ಭಾಷಣಗಳನ್ನಷ್ಟೇ ಕೇಳಬೇಕಾಯಿತು ಎಂದು ಬಿ.ಸಿ.ರೋಡಿನ ಪೊಳಲಿ ದ್ವಾರದ ಬಳಿ ಇರುವ ಮೈದಾನದಲ್ಲಿ ಗುರುವಾರ ಸಂಜೆ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಷಣಕಾರ ನಿಕೇತ್ ರಾಜ್ ಮೌರ್ಯ ಹೇಳಿದರು.
ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಪರ ಪ್ರಚಾರ ಭಾಷಣ ಮಾಡಿದ ಅವರು, ಧರ್ಮನಿರಪೇಕ್ಷ ತತ್ವಗಳನ್ನು ಆಚರಿಸುವ ಪಕ್ಷವೆಂದರೆ ಅದು ಕಾಂಗ್ರೆಸ್ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ, ಬಿಜೆಪಿಯಿಂದ ಆಯ್ಕೆಗೊಂಡ ಸಂಸದರು ಶೂನ್ಯ ಸಾಧನೆ ಮಾಡಿದ್ದಾರೆ, ಅಪಪ್ರಚಾರ ಮಾಡಿದರೆ ಗೆಲ್ಲುತ್ತೇವೆ ಎಂದು ನಂಬಿದ್ದಾರೆ ಎಂದು ಲೇವಡಿ ಮಾಡಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಅಪಪ್ರಚಾರದಿಂದ ತಾನು ವಿಧಾನಸಭೆಯಲ್ಲಿ ಸೋಲನುಭವಿಸಬೇಕಾಯಿತು. ಜನಪರ ಕೆಲಸ ಮಾಡಿದ ತೃಪ್ತಿ ತನಗಿದೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಸಂಸದರಿಂದ ಅಭಿವೃದ್ಧಿಗಳಾಗಿವೆ. ಬಿಜೆಪಿಯಿಂದ ಆಯ್ಕೆಗೊಂಡ ಸಂಸದರ ಯಾವುದಾದರೂ ಒಂದು ಸಾಧನೆಯನ್ನು ಹೇಳುವಿರಾ ಎಂದು ಪ್ರಶ್ನಿಸಿದರು.
ಪಕ್ಷದ ಅಭ್ಯರ್ಥಿ ಮಿಥುನ್ ರೈ ಮಾತನಾಡಿ, ತಾನು ಕೇಸರಿ ಶಾಲು ಹಾಕುವ ಬಗ್ಗೆ ಕೆಲವರು ಪ್ರಸ್ತಾಪಿಸುತ್ತಾರೆ. ಆದರೆ ಕೇಸರಿ ಎಲ್ಲರನ್ನೂ ಒಗ್ಗೂಡಿಸುವ ಸಂಕೇತ, ಹಿಂದು, ಮುಸ್ಲಿಂ, ಕ್ರೈಸ್ತರನ್ನು ಜೊತೆಗೂಡಿಸಿ ಕೆಲಸ ಮಾಡುತ್ತೇನೆ, ತನಗೆ ಅವಕಾಶ ನೀಡಿದರೆ ನಿಷ್ಠೆಯಿಂದ ಕೆಲಸ ಮಾಡುವೆ ಎಂಬ ಆಶ್ವಾಸನೆ ನೀಡಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ, ಈ ಬಾರಿ ಮಿಥುನ್ ರೈ ಅವರನ್ನು ಗೆಲ್ಲಿಸುವಂತೆ ಕರೆ ನೀಡಿದರು.
ಈ ಸಂದರ್ಭ ವಿಧಾನಪರಿಷತ್ತು ಸದಸ್ಯ ಹರೀಶ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, ಶಾಹುಲ್ ಹಮೀದ್, ಪಕ್ಷ ಪ್ರಮುಖರಾದ ಬಿ.ಎಚ್. ಖಾದರ್, ಕೋಡಿಜಾಲ್ ಇಬ್ರಾಹಿಂ, ಜೆಡಿಎಸ್ ಪ್ರಮುಖರಾದ ಮಹಮ್ಮದ್ ಶಫಿ, ಪಿ.ಎ.ರಹೀಂ, ಹಾರೂನ್ ರಶೀದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ ಮಾಣಿ, ಪ್ರಮುಖರಾದ ಬಾಲಕೃಷ್ಣ ಆಳ್ವ ಕೊಡಾಜೆ, ಸದಾಶಿವ ಬಂಗೇರ, ಪ್ರಶಾಂತ್ ಕುಲಾಲ್, ರಾಜಶೇಖರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.