Categories: ಬಂಟ್ವಾಳ

ಯುಪಿಎ ಸರಕಾರ ಮಾಡಿ ತೋರಿಸಿದೆ, ಎನ್.ಡಿ.ಎ ಕೇವಲ ಮಾತಿಗೆ ಸೀಮಿತ: ರೈ

ಬಂಟ್ವಾಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಸಹಿತ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರಕಾರದ ಮಂತ್ರಿಗಳು, ಪಕ್ಷ ಪ್ರಮುಖರು ಕೇವಲ ಭಾಷಣಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದರೆ ಹಿಂದಿನ ಯುಪಿಎ ಅವಧಿಯಲ್ಲಿ ಹಲವು ಜನಪರ ಕಾರ್ಯಗಳನ್ನು ಮಾಡಿ ತೋರಿಸಲಾಗಿತ್ತು. ಕೇಂದ್ರ ಸರಕಾರದ ಹಲವು ಯೋಜನೆಗಳು ಬಡವರಿಗೆ ಪ್ರಯೋಜನ ಲಭಿಸಿದ್ದರೆ, ಅವು ಯು.ಪಿ.ಎ. ಅವಧಿಯಲ್ಲಿದ್ದಾಗ ಜಾರಿಗೊಂಡದ್ದು ಎಂಬುದು ಜನರಿಗೆ ಮನವರಿಕೆ ಮಾಡುವ ಕಾರ್ಯವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಜಾಹೀರಾತು

ಬಂಟ್ವಾಳದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಮಪತಿಗಳಿಗೆ ಲಾಭದಾಯಕವಾಗುವ ಯೋಜನೆಗಳನ್ನು ಎನ್.ಡಿ.ಎ. ಮಾಡಿತು. ಇದರ ಪರಿಣಾಮ ಲಕ್ಷಾಂತರ ಮಧ್ಯಮ, ಬಡ ವರ್ಗದವರು ಬೀದಿಗೆ ಬರುವಂತಾಯಿತು. ಶಿಕ್ಷಣ, ಆರೋಗ್ಯ, ಸಾಕ್ಷರತೆ ಸಹಿತ ಹಲವು ಯೋಜನೆಗಳನ್ನು ಕಾಂಗ್ರೆಸ್ ಸರಕಾರ ತಂದಿತ್ತು. ಉದ್ಯೋಗ ಖಾತ್ರಿ, ಮಾಹಿತಿ ಹಕ್ಕು ಯೋಜನೆಗಳಿಂದಾಗಿ ಜನರಿಗೆ ಲಾಭವಾಗಿತ್ತು. ಹಲವು ಕಾಯ್ದೆಗಳು ಜನರಿಗೆ ವರವಾದರೆ, ಬಿಜೆಪಿಯ ಯಾವುದೇ ಯೋಜನೆಗಳು ಜನರಿಗೆ ಲಾಭ ನೀಡದೆ ಕೇವಲ ಉದ್ಯಮಪತಿಗಳಿಗೆ, ಬಡವರಲ್ಲದವರಿಗೆ ಉಪಕಾರವಾಗಿದೆ ಎಂದು ಆರೋಪಿಸಿದರು.

ಎಲ್ಲಿ ಹೋಗಿದ್ದರು:

ಪಣಂಬೂರಿನಲ್ಲಿರುವ ಡಾಕ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಎನ್.ಡಿ.ಎ.ಸರಕಾರದ ಅವಧಿಯಲ್ಲಿ ಇದ್ದಕ್ಕಿದ್ದಂತೆ ಮುಂಬಯಿಗೆ ವರ್ಗಾಯಿಸಲಾಯಿತು. ನೂರಾರು ದಕ್ಷಿಣ ಕನ್ನಡದ ಕಾರ್ಮಿಕರು ಬೀದಿ ಪಾಲಾಗುವ ಸ್ಥಿತಿ ಬಂತು. ಬಿಎಸ್ಸೆನ್ನೆಲ್ ಗುತ್ತಿಗೆ ನೌಕರರಿಗೆ ವೇತನ ನೀಡದೆ ನಾಲ್ಕಾರು ತಿಂಗಳಾಯಿತು. ಆ ಸಂದರ್ಭ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದ ರೈ, ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಜನರ ಬೆಂಬಲ ವ್ಯಕ್ತವಾಗಿದ್ದು, ದ.ಕ. ಕ್ಷೇತ್ರದಿಂದ ಕಾಂಗ್ರೆಸ್ ಗೆಲ್ಲಿಸಿದರೆ ಬಡವರ ಪರ ಸೇವೆ ಮಾಡಲು ಅವಕಾಶವಾಗುತ್ತದೆ ಎಂದರು.

11ರಂದು ಬಹಿರಂಗ ಪ್ರಚಾರ: ಮಿಥುನ್ ರೈ ಅವರು 11ರಂದು ಬಂಟ್ವಾಳದಲ್ಲಿ ಬಹಿರಂಗ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದು, ಬೆಳಗ್ಗೆ 7 ಕ್ಕೆ ಸರಪಾಡಿ, 7.30ಕ್ಕೆ ಕಕ್ಯಬೀಡು, 8 ಗಂಟೆಗೆ ಕಕ್ಯಪದವು, 8.30ಕ್ಕೆ ಕಾವಳಕಟ್ಟೆ, 9ಕ್ಕೆವಗ್ಗ, 9.15ಕ್ಕೆ ಕಾರಿಂಜ, 9.30ಕ್ಕೆ ಪೂಂಜ, 10ಕ್ಕೆ ಕೆರೆಬಳಿ, 10.30ಕ್ಕೆ ಸಂಗಬೆಟ್ಟು, 10.45ಕ್ಕೆ ಕಲ್ಕುರಿ, 11 ಗಂಟೆಗೆ ಸಿದ್ದಕಟ್ಟೆಯ ವಿವಿಧೆಡೆ ಭೇಟಿ, 11.30ಕ್ಕೆ ಬಡ್ಡಕಟ್ಟೆಯಿಂದ ಬಸ್ತಿಪಡ್ಪುವರೆಗೆ ರೋಡ್ ಶೋ ನಡೆಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಕರೋಪಾಡಿ, 3 ಗಂಟೆಗೆ ಕನ್ಯಾನದಲ್ಲಿ ಸಾರ್ವಜನಿಕ ಸಭೆ, 4 ಗಂಟೆಗೆ ಸಾಲೆತ್ತೂರಿನಲ್ಲಿ ಸಾರ್ವಜನಿಕ ಸಭೆ, ಸಂಜೆ 5ಕ್ಕೆ ನಂದಾವರ, 6ಕ್ಕೆ ಗೂಡಿನಬಳಿಯಲ್ಲಿ ಪಾದಯಾತ್ರೆ ನಡೆಸಿ, 7ಕ್ಕೆ ಕೈಕಂಬ ಜಂಕ್ಷನ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ.ಪದ್ಮಶೇಖರ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ ಮಾಣಿ, ಮಾಜಿ ಅಧ್ಯಕ್ಷರುಗಳಾದ ಮಾಯಿಲಪ್ಪ ಸಾಲಿಯಾನ್, ಬಿ.ಎಂ.ಅಬ್ಬಾಸ್ ಆಲಿ, ಪಕ್ಷ ಪ್ರಮುಖರಾದ ಸಂಜೀವ ಪೂಜಾರಿ, ಸದಾಶಿವ ಬಂಗೇರ, ಜಗದೀಶ ಕೊಯ್ಲ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.