ಸುಡುಬಿಸಿಲಿನಿಂದ ತತ್ತರಿಸಿ ಹೋಗಿದ್ದ ಜನರಿಗೆ ತಂಪೆರೆಯುವಂತೆ ಮಂಗಳವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಮಳೆ ಸುರಿದಿದ್ದು, ಬಿ.ಸಿ.ರೋಡ್, ಬಂಟ್ವಾಳ ಮುಂದಾದೆಡೆ ತೀವ್ರ ಗಾಳಿಯೊಂದಿಗೆ ತುಂತುರು ಮಳೆಯಾಯಿತು.
ಸಂಜೆ ಸುಮಾರು ಐದೂವರೆ ವೇಳೆಗೆ ಇದ್ದಕ್ಕಿದ್ದಂತೆ ದಟ್ಟ ಮೋಡ ಕವಿದು ಬಲವಾದ ಗಾಳಿ ಬೀಸಿದ ಕಾರಣ ಬಸ್ ಗೆ ಕಾಯುತ್ತಿದ್ದವರು, ಅಂಗಡಿ ಮುಂಭಾಗ ನಿಂತಿದ್ದವರು, ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೆ ಧೂಳಿನ ಸ್ನಾನವಾಯಿತು. ಒಡನೆಯೇ ತುಂತುರು ಮಳೆಯೂ ಸುರಿದು ವಾತಾವರಣವನ್ನು ತಂಪಾಗಿಸಿತು. ಗಾಳಿಯಿಂದಾಗಿ ಕೆಲ ಅಂಗಡಿಗಳ ಬೋರ್ಡುಗಳು ಬಿದ್ದಿದ್ದು, ಪ್ಲಾಸ್ಟಿಕ್ ವಸ್ತುಗಳೆಲ್ಲ ಹಾರಾಡತೊಡಗಿದ್ದು ಕಂಡುಬಂತು. ಬಂಟ್ವಾಳ ಸಮೀಪದ ಅಮ್ಟಾಡಿ ಗ್ರಾಮದ ಬೆದ್ರಗುಡ್ಡೆ ಎಂಬಲ್ಲಿ ಗಾಳಿ ಮಳೆಗೆ ಮೋಹನ ಜೋಗಿ ಎಂಬವರ ಮನೆಗೆ ತೆಂಗಿನ ಮರ ಬಿದ್ದು ಸಂಪೂರ್ಣ ಜಖಂ ಆಗಿರುತ್ತದೆ. ಅಮ್ಟಾಡಿ ಗ್ರಾಮ ಲೆಕ್ಕಾಧಿಕಾರಿ ಶಶಿಕುಮಾರ್ ಸ್ಥಳ ಪರಿಶೀಲನೆ ನಡೆಸಿ ಮಹಜರು ನಡೆಸಿದರು. ಗಾಳಿಯಿಂದಾಗಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದ್ದು, ಕೆಲ ಹೊತ್ತಿನಲ್ಲೇ ಸೆಖೆಯ ವಾತಾವರಣ ಮೂಡಲಾರಂಭಿಸಿತು.