ಅವಿಭಕ್ತ ಕುಟುಂಬಗಳಿಲ್ಲದೆ ತುಳು ನಾಡಿನ ಸಂಸ್ಕೃತಿ ಮರೆಯಾಗುತ್ತಿದೆ. ತುಳು ನಾಡಿನ ಜಾನಪದ ವಸ್ತುಗಳ ಸಂಗ್ರಹದ ಮೂಲಕ ಇತಿಹಾಸವನ್ನು ಕಟ್ಟಿಕೊಡುವ ಕೆಲಸವನ್ನು ಪ್ರೋ. ತುಕರಾಮ ಪೂಜಾರಿ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಹೇಳಿದರು.
ಪೆರ್ನೆ ಗ್ರಾಮದ ಅಮೈ ಕೆರೆಂಗೋಡಿ ಕೆ.ಎಮ್ ಬಾಲಕೃಷ್ಣ ಮತ್ತು ಸಹೋದರ ಸಹೋದರಿಯರ ಮನೆಯಲ್ಲಿ ಇತ್ತೀಚೆಗೆ ಏರ್ಪಡಿಸಲಾದ ಗುರುವಂದನಾ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು. ಕೆರೆಂಗೋಡಿ ಕುಟುಂಬಸ್ಥರ ಗುರುಗಳಾಗಿದ್ದ ಕಡೇಶ್ವಾಲ್ಯ ಸರಕಾರಿ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕರಾದ ಅಚ್ಚುತ ರಾವ್ ಮತ್ತು ಕೃಷ್ಣ ಭಂಡಾರಿಯವರನ್ನು ವೇದಿಕೆಯಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ , ರಂಗ ನಿರ್ದೇಶಕ , ಅಭಿರುಚಿ ಜೋಡುಮಾರ್ಗದ ಸಂಚಾಲಕ ಮಹಾಬಲೇಶ್ವರ ಹೆಬ್ಬಾರ್ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ವಿಲ್ಸನ್ ಪ್ರಭಾಕರ ಮುಖ್ಯ ಅತಿಥಿಯಾಗಿದ್ದರು. ಉಪನ್ಯಾಸಕ ಡಾ.ಶ್ರೀಶ ಕುಮಾರ್ ಗುರುವಂದನೆಯ ಪ್ರಾಮುಖ್ಯತೆಯ ಕುರಿತು ಮಾತನಾಡಿದರು. ಗುರುಪರಂಪರೆಯನ್ನು ಸ್ಮರಿಸಿ ಗುರು ಋಣವನ್ನು ತೀರಿಸುವುದು ಶಿಷ್ಯನ ಕರ್ತವ್ಯವಾಗಿದೆ ಎಂದು ತಿಳಿಸಿದರು. ಡಾ. ಗಣೇಶ್ ಅಮೀನ್ ಸಂಕಮಾರ್ ವಿಶೇಷ ಉಪನ್ಯಾಸ ನೀಡಿದರು. ಸರಕಾರಿ ಪದವಿಪೂರ್ವ ಕಾಲೇಜು ಬಂಟ್ವಾಳದ ಪ್ರಾಂಶುಪಾಲ ಡಾ. ಗಿರೀಶ್ ಭಟ್ ಅಜಕಲ ಅಭಿನಂದಿಸಿ ಮಾತನಾಡಿದರು.
ಪ್ರೊ. ತುಕಾರಾಮ ಪೂಜಾರಿಯವರು ತನ್ನ ಗುರುಗಳ ಪ್ರಾಥಮಿಕ ಶಾಲಾ ಶಿಕ್ಷಣದ ಬಾಲ್ಯದ ಅನುಭವಗಳನ್ನು ನೆನಪಿಸಿಕೊಳ್ಳುತ್ತಾ ಗುರುಗಳ ಶಿಕ್ಷಣವೇ ನನ್ನ ಸಾಧನೆಗೆ ಪ್ರೇರಣೆಯಾಗಿದೆ ಎಂದು ಅತಿಥಿಗಳನ್ನು ಸ್ವಾಗತಿಸಿದರು.
ಡಾ ಆಶಾಲತಾ ಸುವರ್ಣ ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ನಿರೂಪಿಸಿದರು. ಡಾ. ವೀಣಾ ಸುಳ್ಯ ಮತ್ತು ವಿನ್ಯಾಸ ಚಂದ್ರ ಇವರು ಮಂಥರಾ ಮಥನಂ ಎಂಬ ಯಕ್ಷಗಾನ ಪ್ರಸಂಗವನ್ನು ವೇದಿಕೆಯಲ್ಲಿ ಪ್ರಸ್ತುತ ಪಡಿಸಿದರು.