ಪ್ರತಿ ವರ್ಷ ಏಪ್ರಿಲ್ 2ರಂದು ವಿಶ್ವ ಆಟಿಸಂ ದಿನವನ್ನಾಗಿ ಆಚರಿಸಲಾಗುತ್ತದೆ. ಆಟಿಸಂ ಬಗ್ಗೆ ಇರುವ ತಪ್ಪು ಕಲ್ಪನೆಗಳು ಮತ್ತು ಮೂಢನಂಬಿಕೆಗಳನ್ನು ತೊಡೆದು ಹಾಕಿ ಜನರಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಆಚರಣೆಯನ್ನು 2007ರಲ್ಲಿ ಯುನೈಟೆಡ್ ಜನರಲ್ ಅಸೆಂಬ್ಲಿ ಜಾರಿಗೆ ತಂದಿತು.
ನರಗಳ ದೌರ್ಬಲ್ಯಕ್ಕೆ ಸಂಬಂಧಿಸಿದ ಮಾನಸಿಕ ಬೆಳವಣಿಗೆಯ ಅಸಾಮರ್ಥ್ಯದ ಸಮಸ್ಯೆ ಆಟಿಸಂ. ಈ ಸಮಸ್ಯೆಯಲ್ಲಿ ಹಲವು ಪ್ರಬೇಧಗಳಿವೆ. ಎಲ್ಲ ಮಕ್ಕಳಂತೆ ಅವರು ಇರುವುದಿಲ್ಲ. ವಿಶೇಷ ಆರೈಕೆ ಮತ್ತು ತರಬೇತಿಯ ಅವಶ್ಯಕತೆ ಇವರಿಗಿದೆ. ಈ ಮಕ್ಕಳು ಒಂದು ಸೀಮಿತ ಗುಂಪಿನಲ್ಲಿ ಗುರುತಿಸಿಕೊಳ್ಳುತ್ತಾರೆ.
ಈ ಮಕ್ಕಳು ಸಾಮಾಜಿಕವಾಗಿ ಬೆರೆಯುವ ವಿವಿಧ ಚಟುವಟಿಕೆಗಳ ಕುರಿತು ಉತ್ಸಾಹ ಹೊಂದಿರುವುದಿಲ್ಲ. ಮುಖ ನೋಡದೆ ಇರುವುದು, ತಮ್ಮಷ್ಟಕೆ ಅಳುವುದು, ಮಾತನಾಡುವುದು, ನಗುವುದು, ವಿಚಿತ್ರ ರೀತಿಯ ಹಾವ ಭಾವಗಳನ್ನು ಹೊಂದಿರುವುದು ಇಂಥ ಗಂಭೀರ ಸ್ವರೂಪದ ಸಮಸ್ಯೆಗಳು ಇವರಲ್ಲಿ ಕಾಣಲು ಸಿಗುತ್ತದೆ.
ಭಾರತದಲ್ಲಿ 18 ದಶಲಕ್ಷ ಮಂದಿ ಆಟಿಸಂ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮೂರನೇ ಅತ್ಯಂತ ದೊಡ್ಡ ಸಮಸ್ಯೆ ಆಟಿಸಂ. ಇದಕ್ಕೆ ಸರಿಯಾದ ತರಬೇತಿ ಬೇಕು.
ಇದ್ದರೆ ಹತೋಟಿಗೆ ತರಬಹುದು. ಎಷ್ಟು ಬೇಕ ಮಗುವಿಗೆ ತರಬೇತಿ ಆರಂಭಿಸಿದರೆ ಅಷ್ಟೇ ವೇಗವಾಗಿ ಮಗುವನ್ನು ಮುಖ್ಯ ವಾಹಿನಿಗೆ ತರಲು ಸಾಧ್ಯ.
ಆಟಿಸಂ ಪರಿಣತಿ ಇರುವ ವಿಶೇಷ ತಜ್ಞರು ಮಕ್ಕಳಿಗೆ ತರಬೇತಿ ನೀಡಬೇಕು. ಶೇ.60ರಿಂದ 90ರವರೆಗೆ ನ್ಯೂನತೆಗಳನ್ನು ಕಡಿಮೆಗೊಳಿಸಲು ಸಾಧ್ಯವಿದೆ. ತೀವ್ರ ಮನಸ್ಸಿನ ಆಟಿಸಂ ಇರುವ ಮಕ್ಕಳಿಗೆ ಅಕ್ಷರ ಪರಿಚಯ ಆಗದೇ ಇರುವ ಸಾಧ್ಯತೆಗಳೂ ಇವೆ. ಆದರೆ ಇವರಿಗೆ ದೈನಂದಿನ ತಮ್ಮ ಕೆಲಸಗಳನ್ನು ಸ್ವತಂತ್ರವಾಗಿ ನಿಭಾಯಿಸಲು ತರಬೇತಿ ಕೊಡಬಹುದು. ಆಟಿಸಂ ಮೆಟ್ಟಿ ನಿಂತು ಕ್ರೀಡೆ, ನೃತ್ಯ, ವಿದ್ಯೆಯಲ್ಲಿ ಸಾಧನೆ ಮಾಡಿದವರು ನಮ್ಮ ನಡುವೆ ಇದ್ದಾರೆ.