ಕಾಂಗ್ರೆಸ್ ಪಕ್ಷದ ಜನಪ್ರಿಯತೆ ಕಡಿಮೆಯಾಗುತ್ತಿದೆ. ಎಲ್ಲ ಸಮುದಾಯದವರಿಗೂ ಎಸ್.ಡಿ.ಪಿ.ಐ. ಮೇಲೆ ಭರವಸೆ ಮೂಡಿದೆ. ಈಗೇನಿದ್ದರೂ ಬಿಜೆಪಿ ಮತ್ತು ಎಸ್.ಡಿ.ಪಿ.ಐ. ನಡುವೆ ನೇರ ಸ್ಪರ್ಧೆ ಎಂದು ದಕ್ಷಿಣ ಕನ್ನಡ ಲೋಕಸಭೆಯಲ್ಲಿ ಎಸ್.ಡಿ.ಪಿ.ಐ. ಪರ ಕಣಕ್ಕಿಳಿದಿರುವ ಮುಖಂಡ ಇಲ್ಯಾಸ್ ಮಹಮ್ಮದ್ ತುಂಬೆ ಹೇಳಿದ್ದಾರೆ.
ಅವರು ಬಂಟ್ವಾಳದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಪರ್ಧೆ ಈಗಿರುವುದು ನಮ್ಮ ಮತ್ತು ಬಿಜೆಪಿ ಮಧ್ಯೆ ಮಾತ್ರ, ಕಾಂಗ್ರೆಸ್ ತೃತೀಯ ಸ್ಥಾನಕ್ಕೆ ತಳ್ಳಲ್ಪಡುತ್ತದೆ ಎಂದು ಭವಿಷ್ಯ ನುಡಿದರು.
ಈಗಾಗಲೇ ಕ್ಷೇತ್ರಾದ್ಯಂತ ಸಂಚರಿಸುತ್ತಿದ್ದು, ಹಾಲಿ ಸಂಸದರ ವಿರುದ್ಧ ಜನಾಕ್ರೋಶವಿದೆ. ಮೀನುಗಾರರು, ಬಡವರ ಪರ ಧ್ವನಿ ಎತ್ತದ ಕುರಿತು ಜನರು ಮಾತನಾಡಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಎಸ್.ಡಿ.ಪಿ.ಐ. ಜನಪರ ಕೆಲಸ ಮಾಡಲಿದೆ. ಕೋಮುವಾದ, ನಿಷ್ಕ್ರಿಯ ರಾಜಕಾರಣಗಳಿಂದ ದಕ್ಷಿಣ ಕನ್ನಡ ಹಿಂದುಳಿದಿದ್ದು, ಇದು ಮರುಕಳಿಸದಂತೆ ಜನ ಜಾಗೃತರಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಪಕ್ಷ ಪ್ರಮುಖರಾದ ಶಾಹುಲ್ ಹಮೀದ್, ರಿಯಾಜ್ ಫರಂಗಿಪೇಟೆ, ಅನ್ವರ್ ಸಾದತ್, ಹನೀಫ್ ಖಾನ್ ಕೊಡಾಜೆ, ಮುನೀಷ್ ಆಲಿ, ಇಸ್ಮಾಯಿಲ್ ಬಾವಾ ಉಪಸ್ಥಿತರಿದ್ದರು.