ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ, ಬಂಟ್ವಾಳ ತಾಲೂಕು ಪಂಚಾಯತ್ ವತಿಯಿಂದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ ಮಾರ್ಚ್ 30ರಂದು ದಿನವಿಡೀ ಬಿ.ಸಿ.ರೋಡಿನಲ್ಲಿ ನಡೆಯಲಿದೆ.
ಈ ಸಂದರ್ಭ ವಿವಿ ಪ್ಯಾಟ್ ಮತ್ತು ಮತಯಂತ್ರದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ಬಿ.ಸಿ.ರೋಡ್ ನಲ್ಲಿರುವ ಪುರಸಭಾ ಬಸ್ ನಿಲ್ದಾಣದಲ್ಲಿ ನಡೆಯುವುದು.
ವಕೀಲರ ಸಂಘ (ರಿ) ಬಂಟ್ವಾಳ, ಆಟೊ ಚಾಲಕ ಮಾಲೀಕರ ಸಂಘ (ಬಿಎಂಎಸ್) (ರಿ) ಬಂಟ್ವಾಳ, ಗ್ಯಾರೇಜು ಮಾಲೀಕರ ಸಂಘ ಬಂಟ್ವಾಳ, ದ.ಕ.ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕರ ಸಂಘ (ರಿ) ಬಂಟ್ವಾಳ ಬಿ.ಸಿರೋಡ್, ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿ, ಡ್ರೈವರ್ ಅಸೋಸಿಯೇಶನ್ ಬಂಟ್ವಾಳ, ಸೋಶಿಯಲ್ ಡೆಮಾಕ್ರಾಟಿಕ್ ಆಟೊ ಚಾಲಕರ ಯೂನಿಯನ್ (ರಿ), ಬಂಟ್ವಾಳ ಮತ್ತು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗ ನೀಡಲಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 9.30ರಿಂದ ಕೈಕಂಬ ಪೊಳಲಿ ದ್ವಾರದಿಂದ ಜಾಥಾ ಬಿ.ಸಿ.ರೋಡ್ ಬಸ್ ನಿಲ್ದಾಣದವರೆಗೆ ನಡೆಯಲಿದ್ದು, ಈ ಸಂದರ್ಭ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾರರಿಗೆ ಅರಿವು ಮೂಡಿಸುವ ಕಾರ್ಯ ನಡೆಸಲಾಗುವುದು. ಬಳಿಕ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ವಿವಿ ಪ್ಯಾಟ್ ಮತ್ತು ಮತದಾನದ ಕುರಿತು ಮಾಹಿತಿ ನೀಡುವ ಕಾರ್ಯ ಅಂದು ಸಂಜೆ 5 ಗಂಟೆವರೆಗೆ ನಡೆಯಲಿದೆ ಎಂದು ನೀತಿ ಸಂಹಿತೆ ಅಧಿಕಾರಿಯೂ ಆಗಿರುವ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದು ಅವರು ವಿನಂತಿಸಿದ್ದಾರೆ.
ಏನಿದು ವಿವಿ ಪ್ಯಾಟ್:
ಪೇಪರ್ ಆಡಿಟ್ ಟ್ರೈಲ್ ಅಥವಾ ವಿವಿ ಪ್ಯಾಟ್ ಎಂದರೆ ಮತ ಸರಿಯಾಗಿ ಚಲಾವಣೆ ಆಗಿದೆ ಎಂಬುದಕ್ಕೆ ರಸೀತಿ ನೀಡುವುದಾಗಿದೆ. ಮತದಾರ ಇವಿಎಂನಲ್ಲಿ ತನ್ನ ಆಯ್ಕೆಯ ಅಭ್ಯರ್ಥಿಯ ಹೆಸರಿನ ಎದುರಿನ ಗುಂಡಿ ಒತ್ತಿದ ಕೂಡಲೇ ಪಕ್ಕದಲ್ಲಿರುವ ವಿವಿಪ್ಯಾಟ್ ಯಂತ್ರ ಆ ಅಭ್ಯರ್ಥಿಯ ಹೆಸರು ಮತ್ತು ಮತದಾನ ಚಿಹ್ನೆಯುಳ್ಳ ಚೀಟಿ ಮುದ್ರಿಸಿ ತೋರಿಸುತ್ತದೆ.
. ಇದು ತನ್ನ ಮತ ಚಲಾವಣೆ ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಲು ಮತದಾರನಿಗೆ ಅವಕಾಶ. ಗಾಜಿನ ಪೆಟ್ಟಿಗೆಯಲ್ಲಿರುವ ಕಾರಣ ಮತದಾರ ಮಾತ್ರ ಇದನ್ನು ನೋಡಲು ಸಾಧ್ಯ. ಚೀಟಿ 7 ಸೆಕೆಂಡ್ ಕಾಲ ಮಾತ್ರ ಕಾಣುತ್ತದೆ, ಬಳಿಕ ಯಂತ್ರ ಅದನ್ನು ಕತ್ತರಿಸಿ ಮುಚ್ಚಿದ ಪೆಟ್ಟಿಗೆಯೊಳಕ್ಕೆ ಬೀಳಿಸುತ್ತದೆ.