ಮುಡಿಪು: ಅಮ್ಮೆಂಬಳ ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಷ್ಟಬಂಧ ಸಹಸ್ರಕುಂಭಾಭಿಷೇಕ ಪ್ರಯುಕ್ತ ಹೊರೆಕಾಣಿಕೆ ಮೆರವಣಿಗೆ ಬುಧವಾರ ಸಂಜೆ ನಡೆಯಿತು. ಹೊರೆಕಾಣಿಕೆ ಶೋಭಾಯಾತ್ರೆ ಬೋಳ್ಯಾರಿನಿಂದ ಕುರ್ನಾಡಿಗೆ ಆಗಮಿಸುವ ಸಂದರ್ಭ ದಾರಿ ಮಧ್ಯೆ ಮದ್ದನಡ್ಕ ಮತ್ತು ಕುರ್ನಾಡಿನ ಮುಸಲ್ಮಾನ ಬಾಂಧವರು ತಂಪು ಪಾನೀಯ ವಿತರಿಸಿ ಸೌಹಾರ್ದತೆ ಮೆರೆದರು.
ಬೋಳ್ಯಾರು ಜಂಕ್ಷನ್ ನಲ್ಲಿ ನಾರ್ಯಗುತ್ತು ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ ಶೋಭಾಯಾತ್ರೆಗೆ ಚಾಲನೆ ನೀಡಿದರು.ಸುತ್ತಮುತ್ತಲ ಹತ್ತಾರು ಗ್ರಾಮಗಳ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಹೊರೆಕಾಣಿಕೆ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.
ಬಳಿಕ ದೇವಸ್ಥಾನದ ರಥಗದ್ದೆಯಲ್ಲಿ ಉಗ್ರಾಣ ಮುಹೂರ್ತವನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಕುರ್ನಾಡುಗುತ್ತು ಡಾ.ಎಚ್.ಬಾಲಕೃಷ್ಣ ನಾಯ್ಕ್ ನೆರವೇರಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಎಚ್.ಬಾಲಕೃಷ್ಣ ನಾಯ್ಕ್, ಹೊರೆಕಾಣಿಕೆ ಸಮಿತಿ ಸಂಚಾಲಕ ಸಂತೋಷ್ ಕುಮಾರ್ ರೈ ಬೋಳ್ಯಾರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿವಶಂಕರ ಭಟ್ ಕಾಡಿಮಾರು, ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಟ.ಜಿ.ರಾಜಾರಾಮ ಭಟ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ವೆಂಕಪ್ಪ ಕಾಜವ ಮಿತ್ತಕೋಡಿ, ಕಾರ್ಯಾಧ್ಯಕ್ಷ ನರಸಿಂಹ ಹೆಗ್ಡೆ ಕುರ್ನಾಡುಗುತ್ತು, ಜೀರ್ಣೋದ್ಧರ ಸಮಿತಿ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಫಜೀರುಗುತ್ತು ಸಹಿತ ಸಮಿತಿ ಪ್ರಮುಖರು, ಸಹಸ್ರಾರು ಗ್ರಾಮಸ್ಥರು ಪಾಲ್ಗೊಂಡರು.
ಸಂಜೆ 7 ಗಂಟೆಗೆ ತಂತ್ರಿವರ್ಯರ ಆಗಮನದ ಬಳಿಕ, ಸ್ವಾಗತ, ಆಚಾರ್ಯ ವರಣ, ಪ್ರಾರ್ಥನೆ, ಪ್ರಾಸಾದ ಪರಿಗೃಹ, ಪುಣ್ಯಾಹ, ಪ್ರಾಸಾದ ಶುದ್ಧಿ, ಅಂಕುರಾರ್ಪಣೆ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿ ಇತ್ಯಾದಿ ಕಾರ್ಯಕ್ರಮಗಳು ನಡೆದವು.
ಸಂಜೆ ಕುರ್ನಾಡುಗುತ್ತು ಎಚ್.ರಾಮಯ್ಯ ನಾಯ್ಕ್ ವೇದಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಮುಖ್ಯ ಸಲಹೆಗಾರ ರಘುರಾಮ ತಂತ್ರಿ ಉದ್ಘಾಟಿಸಿದರು.
ದೊಂದಿ ಬೆಳಕಿನ ಬಯಲಾಟ:
ದೇವಸ್ಥಾನದ ಹೊರಾಂಗಣದಲ್ಲಿ ರಾತ್ರಿ 9.30ರ ಬಳಿಕ ಕುರ್ನಾಡು ಶ್ರೀ ದತ್ತಾತ್ರೆಯ ಯಕ್ಷಗಾನ ಮತ್ತು ಭಜನಾ ಮಂಡಳಿಯವರಿಂದ ಯಕ್ಷಗಾನ ಬಯಲಾಟ “ಭಾರತರತ್ನ ವೀರ ಅಭಿಮನ್ಯು” ಪ್ರದರ್ಶನ ನಡೆಯಿತು. ವೇದಿಕೆ ಸುತ್ತ ದೊಂದಿಗಳನ್ನು ಹಚ್ಚಿಟ್ಟು ಅದೇ ಬೆಳಕಿನಲ್ಲಿ ಬಯಲಾಟ ನಡೆದದ್ದು ವಿಶೇಷ.
ಗುರುವಾರ ಬೆಳಗ್ಗೆ 7 ಗಂಟೆಯಿಂದ: ಗಣಪತಿ ಹೋಮ, ಅಂಕುರಪೂಜೆ, ಬಿಂಬುಶುದ್ಧಿ ಪೂಜೆ, ಪ್ರಾಯಶ್ಚಿತ್ತ ಹೋಮ, ಪ್ರೋಕ್ತ ಹೋಮ, ಹೋಮಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಪೂಜೆ , ರಾತ್ರಿ ಅಂಕುರಪೂಜೆ, ದುರ್ಗಾ ನಮಸ್ಕಾರ ಪೂಜೆ, 8.30ಕ್ಕೆ ರಾತ್ರಿ ಪೂಜೆ ನೆರವೇರಿದವು.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ