ಮುಡಿಪು: ಸುಮಾರು 1000 ವರ್ಷಗಳ ಇತಿಹಾಸವಿರುವ ಬಂಟ್ವಾಳ ತಾಲೂಕಿನ ಅಮ್ಮೆಂಬಳ ಮಾಗಣೆ ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಷ್ಟಬಂಧ ಸಹಸ್ರ ಕುಂಭಾಭಿಷೇಕ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
25 ವರ್ಷಗಳ ಬಳಿಕ ನವೀಕಣಗೊಂಡ ದೇವಸ್ಥಾನದಲ್ಲಿ ಮಾ.27ರಿಂದ ಏ.1ರ ತನಕ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಉತ್ಸವಾದಿಗಳನ್ನು ಆಯೋಜಿಸಲಾಗಿದೆ.
ದೇವಸ್ಥಾನವನ್ನು ಸುಮಾರು ೪ ಕೋಟಿ ರು.ವೆಚ್ಚದಲ್ಲಿ ನವೀಕರಿಸಲಾಗಿದೆ. ಎದುರಿನ ಗೋಪುರ, ವಸಂತ ಮಂಟಪ, ನಾಗನಕಟ್ಟೆ, ದೇವರಕಟ್ಟೆ, ದೇವಿಯ ಕಟ್ಟೆ, ಗಣಪತಿ ಗುಡಿ, ಗಿರಾವು ದೈವದ ಗುಡಿಗಳನ್ನು ನವೀಕರಿಸಲಾಗಿದೆ. ೧೦೦೦ ಮಂದಿ ಉಣ್ಣಬಹುದಾದ ಭೋಜನಶಾಲೆ, ಪಾಕಶಾಲೆ, ಅತಿಥಿಗಳ ಕೊಠಡಿ, ಕಚೇರಿ ಕೊಠಡಿ, ಶೌಚಾಲಯಗಳನ್ನು ಹೊಸದಾಗಿ ಶಾಶ್ವತ ಕಾಮಗಾರಿ ರೂಪದಲ್ಲಿ ನಿರ್ಮಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ 4000 ಸಭಿಕರ ಸಾಮರ್ಥ್ಯದ ವಿಶಾಲ ಸಭಾಂಗಣ ಹಾಗೂ ವೇದಿಕೆ, 10 ಸಾವಿರ ಮಂದಿಯ ಸಾಮರ್ಥ್ಯದ ಭೋಜನ ಶಾಲೆ ನಿರ್ಮಿಸಲಾಗಿದೆ. ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನವಿದ್ದು, ಇತರ ದಿನಗಳಂದು ಸುಮಾರು 10 ಸಾವಿರ ಮಂದಿ ಹಾಗೂ ಸಹಸ್ರ ಕುಂಭಾಭಿಷೇಕದ ದಿನ ಸುಮಾರು ೨೫ ಸಾವಿರ ಮಂದಿ ಅನ್ನದಾನ ಸ್ವೀಕರಿಸುವ ನಿರೀಕ್ಷೆಯಿದೆ.
ವಾಹನ ನಿಲುಗಡೆ: ಸುಮಾರು 2000 ವಾಹನಗಳನ್ನು ದೇವಳದ ಪಕ್ಕದ ಗದ್ದೆಯಲ್ಲಿ ನಿಲುಗಡೆಗೊಳಿಸಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಮಾರು 2 ಸಾವಿರ ಮಂದಿ ಉತ್ಸವದಲ್ಲಿ ಸ್ವಯಂಸೇವಕರಾಗಿ ದುಡಿಯಲಿದ್ದಾರೆ.
ಕಳೆದ ಮೂರು ತಿಂಗಳುಗಳಿಂದ ದೇವಸ್ಥಾನ ವ್ಯಾಪ್ತಿಯ ಫಜೀರು, ಬೋಳ್ಯಾರು, ಕುರ್ನಾಡು ಹಾಗೂ ಚೇಳೂರು ಗ್ರಾಮಗಳಿಂದ ಸಾವಿರಾರು ಮಂದಿ ಶ್ರಮದಾನದ ಮೂಲಕ ದೇವಸ್ಥಾನದ ನವೀಕರಣ ಕಾರ್ಯಗಳನ್ನು ಸುಲಭಗೊಳಿಸಿದರೆ. ಪ್ರತಿದಿನ ಸುಮಾರು ೪೦೦-೫೦೦ ಮಂದಿ ಶ್ರಮದಾನದಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದು, ಅಂದಾಜು 50 ಲಕ್ಷ ರು.ಗಳಷ್ಟು ಮೌಲ್ಯದ ಕೆಲಸಗಳು ಶ್ರಮದಾನದಿಂದಲೇ ನಡೆದಿದೆ ಎನ್ನುತ್ತಾರೆ ದೇವಸ್ಥಾನದ ಆಡಳಿತ ಮಂಡಳಿಯವರು.
ಹೊರೆಕಾಣಿಕೆ ಸಮರ್ಪಣೆ: ವಿವಿಧ ಊರುಗಳಿಂದ ಆಗಮಿಸುವ ಹೊರಕಾಣಿಕೆ ಸಮರ್ಪಣೆ ವಾಹನಗಳು ಮಾ.೨೭ರಂದು ಸಂಜೆ ೫ಕ್ಕೆ ಬೋಳ್ಯಾರು ವೃತ್ತದಲ್ಲಿ ಒಟ್ಟು ಸೇರಲಿದ್ದು, ಅಲ್ಲಿಂದ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ
ಸುಮಾರು ೫ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಜೀರ್ಣೋದ್ಧಾರ ಸಮಿತಿ ಸಂಚಾಲಕ ಜಯರಾಮ ಸಾಂತ ಬೋಳ್ಯಾರ್‌ಗುತ್ತು ತಿಳಿಸಿದ್ದಾರೆ. ಆ ದಿನ ಸಂಜೆ 7ಕ್ಕೆ ತಂತ್ರಿಗಳು ಆಗಮಿಸಲಿದ್ದು, ಬಳಿಕ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು ನಡೆದು ಏ.೧ರಂದು ಮುಂಜಾನೆ 6.26 ರಿಂದ 7.13 ರ ವರೆಗಿನ ಮುಹೂರ್ತದಲ್ಲಿ ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕಗಳು ನಡೆಯಲಿವೆ.
ಮಾ.29ರಂದು ಸಂಜೆ ೬ಕ್ಕೆ ಮಾತೃಸಂಗಮ ಧಾರ್ಮಿಕ ಸಭೆ, ಮಾ.30, 31 ಹಾಗೂ ಏ.1ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮಗಳು ಗಣ್ಯರು, ಸಂತರ ಸಮ್ಮುಖದಲ್ಲಿ ನಡೆಯಲಿವೆ.
ಸಾಂಸ್ಕೃತಿಕ ವೈಭವ: ಸಾಂಸ್ಕೃತಿಕ ಕಾರ್ಯಕ್ರಮ ಪ್ರಯುಕ್ತ ಮಾ.27ರಂದು ರಾತ್ರಿ ೮ರಿಂದ ದೊಂದಿ ಬೆಳಕಿನಲ್ಲಿ ‘ಭಾರತರತ್ನ ವೀರ ಅಭಿಮನ್ಯು’ ಯಕ್ಷಗಾನ ಬಯಲಾಟ, ಮಾ.28 ರಂದು ‘ಕದಂಬ ಕೌಶಿಕೆ’ ಯಕ್ಷಗಾನ ಬಯಲಾಟ, ಮಾ.29ರಂದು ಪುಣ್ಯಭೂಮಿ ಭಾರತ ನುಡಿ-ನಾದ-ನಾಟ್ಯಾಮೃತ, ‘ತೆಲಿಕೆ ಬಂಜಿ ನಿಲಿಕೆ’ ಹಾಸ್ಯ ವೈಭವ, ಮಾ.30ರಂದು ಸಂಜೆ 7.30ರಿಂದ ‘ತಿರುಪತಿ ತಿಮ್ಮಪ್ಪೆ’ ಪೌರಾಣಿಕ ನಾಟಕ, ಮಾ.31ರಂದು ಅಪರಾಹ್ನ 2ರಿಂದ ಯಕ್ಷ ನಾಟ್ಯ ವೈಭವ, ರಾತ್ರಿ 8ರಿಂದ ಡಾ.ಕದ್ರಿ ಗೋಪಾಲನಾಥ್ ಮತ್ತು ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರಿಂದ ಸ್ಯಾಕ್ಸೋಫೋನ್ ಮತ್ತು ಬಾನ್ಸುರಿ ಜುಗಲ್ ಬಂಧಿ, ಏ.1ರಂದು ಅಪರಾಹ್ನ2 ರಿಂದ ಯಕ್ಷಗಾನ ತಾಳಮದ್ದಳೆ ಭೀಷ್ಮವಿಜಯ, ರಾತ್ರಿ 10.30ರಿಂದ ತುಳು ನಾಟಕ ‘ಪೊಪ್ಪ’ ಸಹಿತ ಹತ್ತು ಹಲವು ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಎಚ್.ಬಾಲಕೃಷ್ಣ ನಾಯ್ಕ್, ಮೊಕ್ತೇಸರ ಸುದರ್ಶನ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿವಶಂಕರ ಭಟ್, ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಫಜೀರುಗುತ್ತು ಸಹಿತ ದೇವಸ್ಥಾನದ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಕುರ್ನಾಡಿನ ಗೃಹ ದೈವ ಗಿರವು ಪಾರ್ವತಿಯ ಒಂದು ಅಂಶ. ಮೂರ್ಛೆರೋಗ ಇರುವವರು ದೇವರಿಗೆ ಮತ್ತು ದೈವಕ್ಕೆ ಪ್ರಾರ್ಥಿಸಿ ಮನೆಗೆ ಹೋಗಿ ಬಿಳಿ ಹುಂಜವನ್ನು ಆಯ್ಕೆ ಮಾಡಿ ಅದನ್ನು ಜೋಪಾನವಾಗಿಟ್ಟು, 48 ದಿವಸಗಳ ಕಾಲ ದಿನಾಲೂ ಅಕ್ಕಿ ಅಥವಾ ಬತ್ತವನ್ನು ತಲೆಗೆ ನಿವಾಳಿಸಿ ಕೋಳಿಗೆ ಹಾಕಿ 48 ದಿನ ಆದ ಮೇಲೆ ದೈವಕ್ಕೆ ಒಪ್ಪಿಸಿ ಪ್ರಸಾದ ಸ್ವೀಕರಿಸಿದಲ್ಲಿ ಮೂರ್ಛೆ ರೋಗ ಶಮನವಾಗುವುದು ಎಂಬ ನಂಬಿಕೆ ಇದೆ.