ಬಂಟ್ವಾಳ: ಬಂಟ್ವಾಳ ಮತ್ತು ಮೂಡುಬಿದ್ರೆಯಲ್ಲಿ ಓದುತ್ತಿರುವ ತಾಲೂಕಿನ ಇಬ್ಬರು ಸಹೋದರ-ಸಹೋದರಿ ಮುಂದಿನ ತಿಂಗಳು ಅಸ್ಸಾಂನ ಗುಹಾವಟಿ ಮತ್ತು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ಕರ್ನಾಟಕ ಪ್ರತಿನಿಧಿಸಲು ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.
ಮೂಡುಬಿದ್ರೆ ಪಾಲಿಟೆಕ್ನಿಕ್ ವಿದ್ಯಾರ್ಥಿ ಮೋಕ್ಷಿತ್ ಎಂ.ಶೆಟ್ಟಿ ಮತ್ತು ಇವರ ಸಹೋದರಿ ಬಂಟ್ವಾಳ ಎಸ್‌ವಿಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಹನಾ ಎಂ.ಶೆಟ್ಟಿ ಇವರು ೫೫ ಕೆ.ಜಿ. ಮತ್ತು ೫೦ ಕೆ.ಜಿ. ಕುಮಿಟೆ ವೈಯಕ್ತಿಕ ವಿಭಾಗದಲ್ಲಿ ರಾಜ್ಯವನ್ನು ಪ್ರತಿನಿಧಿಸುವರು.
ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಕರ್ನಾಟಕ ಕರಾಟೆ ಡೂ ಸ್ಪೋರ್ಟ್ಸ್ ಎಸೋಸಿಯೇಶನ್ ವತಿಯಿಂದ ಇದೇ ೨೨ರಂದು ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಇವರು ಪ್ರಥಮ ಸ್ಥಾನ ಗೆದ್ದುಕೊಂಡಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ಜೊತೆಗೆ ಸ್ವತಃ ಭರತನಾಟ್ಯ ಕಲಾವಿದೆಯಾಗಿರುವ ಸಹನಾ ಎಂ.ಶೆಟ್ಟಿ ಇವರು ಏ.೪ರಿಂದ ೭ರತನಕ ಅಸ್ಸಾಂನ ಗುವಾಹಟಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವರು.
ಸಿವಿಲ್ ಎಂಜಿನಿಯರ್ ಓದುತ್ತಿರುವ ಸಹೋದರ ಮೋಕ್ಷಿತ್ ಎಂ.ಶೆಟ್ಟಿ ದೆಹಲಿಯಲ್ಲಿ ಏ.೨೪ರಿಂದ ೨೭ರತನಕ ನಡೆಯುವ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವರು ಎಂದು ಪ್ರಕಟಣೆ ತಿಳಿಸಿದೆ.