ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಸ್ವಾಗತ ಕೋರುವ ಬ್ಯಾನರ್, ಕಮಾನುಗಳು, ಸೆಖೆಯಲ್ಲಿ ಬೆವರೊರೆಸಿಕೊಳ್ಳುವ ವಿದ್ಯಾರ್ಥಿಗಳಿಗೆ ಪಾನೀಯ, ಉಪಾಹಾರ ವ್ಯವಸ್ಥೆ, ಧರ್ಮಗುರುಗಳಿಂದ ಆಶೀರ್ವಾದ.. ಹೀಗೆ ಬಂಟ್ವಾಳ ತಾಲೂಕಿನಲ್ಲಿ ಗುರುವಾರ ಪ್ರಥಮ ಭಾಷೆ (ಕನ್ನಡ) ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಷ್ಟೇ ಅಲ್ಲ, ಶಿಕ್ಷಣಾಭಿಮಾನಿಗಳಿಂದಲೂ ಸಂಭ್ರಮದ ಪ್ರೋತ್ಸಾಹ.
ಬಂಟ್ವಾಳ ತಾಲೂಕಿನಾದ್ಯಂತ 17 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭಗೊಂಡಿವೆ. ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆ, ಪಾಣೆಮಂಗಳೂರು ಶ್ರೀಮತಿ ಲಕ್ಷ್ಮೀದೇವಿ ನರಸಿಂಹ ಪೈ ವಿದ್ಯಾಲಯ, ಮೊಡಂಕಾಪು ದೀಪಿಕಾ ಪ್ರೌಢಶಾಲೆ, ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಬಾಲಿಕೆಯರ ಪ್ರೌಢಶಾಲೆ, ವಿಠಲ ಪದವಿಪೂರ್ವ ಕಾಲೇಜು ವಿಟ್ಲ, ವಿಠಲ ಪ್ರೌಢಶಾಲೆ ವಿಟ್ಲ, ಬಂಟ್ವಾಳ ಎಸ್.ವಿ.ಎಸ್. ಪ್ರೌಢಶಾಲೆ, ಅಳಿಕೆ ಸತ್ಯಸಾಯಿ ಪ್ರೌಢಶಾಲೆ, ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆ, ವಾಮದಪದವು ಸರಕಾರಿ ಪದವಿಪೂರ್ವ ಕಾಲೇಜು, ಕುರ್ನಾಡು ಸರಕಾರಿ ಪದವಿಪೂರ್ವ ಕಾಲೇಜು, ಮಾಣಿ ಕರ್ನಾಟಕ ಪ್ರೌಢಶಾಲೆ, ತುಂಬೆ ಪದವಿಪೂರ್ವ ಕಾಲೇಜು, ಕನ್ಯಾನ ಸರಕಾರಿ ಪದವಿಪೂರ್ವ ಕಾಲೇಜು, ಕಾವಳಪಡೂರು ವಗ್ಗ ಸರಕಾರಿ ಪದವಿಪೂರ್ವ ಕಾಲೇಜು, ಮೊಂಟೆಪದವು ಸರಕಾರಿ ಪದವಿಪೂರ್ವ ಕಾಲೇಜು, ಕೊಳ್ನಾಡು ಸರಕಾರಿ ಪ್ರೌಢಶಾಲೆ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ.
ಗುರುವಾರ ನಡೆದ ಪರೀಕ್ಷೆಗೆ 5250 ಮಂದಿ ಹಾಜರಾಗಬೇಕಿತ್ತು. ಆದರೆ 60 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಇವರಲ್ಲಿ 40 ಹುಡುಗರು, 20 ಹುಡುಗಿಯರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಮಾಹಿತಿ ನೀಡಿದರು.
ಬ್ಯಾನರ್, ಸ್ವಾಗತ ಗೇಟ್ ಮುಂಭಾಗ ಸ್ವಾಗತದ ಬ್ಯಾನರ್, ಶಾಮಿಯಾನ, ಬಣ್ಣಬಣ್ಣದ ಬಟ್ಟೆ, ಬಲೂನುಗಳಿಂದ ಸಿಂಗರಿಸಿದ ಶಾಲಾ ಮೈದಾನ ಯಾವುದೋ ಪ್ರತಿಭೋತ್ಸವದಂತೆ ತೋರುವ ವ್ಯವಸ್ಥೆಯನ್ನು ಹೊಂದಿದ್ದ ವಗ್ಗ ಸರಕಾರಿ ಪ್ರೌಢಶಾಲಾ ಪರೀಕ್ಷಾ ಕೇಂದ್ರ ಗಮನ ಸೆಳೆಯಿತು. ತಾಲೂಕಿನ ಮೊಂಟೆಪದವು ಕೇಂದ್ರದಲ್ಲಿ ಮೂರು ಧರ್ಮಗಳ ಗುರುಗಳು ಬಂದು ವಿದ್ಯಾರ್ಥಿಗಳಿಗೆ ಆಶೀರ್ವಾದ ಮಾಡಿದರು. ಬ್ಯಾಂಡ್, ವಾದ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಅಲ್ಲಿ ಸ್ವಾಗತಿಸಲಾಯಿತು. ಉಪಾಹಾರ, ಪಾನೀಯ ವ್ಯವಸ್ಥೆಯನ್ನೂ ಮಾಡಲಾಯಿತು.