ರಸ್ತೆ ಇವತ್ತು ಸರಿಯಾಗುತ್ತದೆ, ನಾಳೆ ಸರಿಯಾಗುತ್ತದೆ ಎಂಬ ರಾಜಕಾರಣಿಗಳ ಮಾತು ನಂಬಿ, ಬೇಸತ್ತ ಜನರು ಸ್ವತಃ ತಾವೇ ‘ರಸ್ತೆಗಿಳಿದು’ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸುವ ಮೂಲಕ ‘ನೋಡಿ, ನಾವೇ ರಸ್ತೆ ಮಾಡಿದ್ದೇವೆ’ ಎಂದು ಹೇಳಲು ಸನ್ನದ್ಧರಾಗಿದ್ದಾರೆ.
ಬಂಟ್ವಾಳ ತಾಲೂಕಿನ ಅಳಿಕೆ, ಗಂಗೆಮೂಲೆ, ಮೆಣಸಿನಗಂಡಿ, ಮೂಜಮೂಲೆ, ಮುಳಿಯ ನೆಕ್ಕರೆ, ಕೆಳಗಿನ ಮುಳಿಯವಾಗಿ ನೆಕ್ಕಿತ್ತಪುಣಿ ಸೇರುವ ಈ ರಸ್ತೆಯಲ್ಲಿ 100ಕ್ಕೂ ಅಧಿಕ ಮನೆಗಳಿವೆ. ಇದು ಈ ಊರಿನ ಪ್ರಮುಖ ಸಂಪರ್ಕ ರಸ್ತೆ. ಮಳೆಗಾಲದಲ್ಲಿ ವಾಹನ ಸಂಚಾರಕ್ಕೂ ಕಷ್ಟಕರವಾಗುವಂಥ ಪರಿಸ್ಥಿತಿ. ಓಟಿನ ಬೇಟೆಗೆ ಬರುವ ಸಂದರ್ಭ ನಾನು ಮಾಡಿಸುತ್ತೇನೆ, ಎಂದು ಹೇಳಿದವರು ಮರೆತುಬಿಡುವ ಸನ್ನಿವೇಶಗಳು ಇಲ್ಲೂ ಮರುಕಳಿಸಿವೆ. ಹೀಗಾಗಿ ಇನ್ನು ಮತ್ತೆ ಬಂದು ಭರವಸೆ ನೀಡುವುದು ಬೇಡ, ನಾವೇ ಅಭಿವೃದ್ಧಿಪಡುಸುತ್ತೇವೆ ಎಂದು ಫಲಾನುಭವಿಗಳು ನಿರ್ಧರಿಸಿ ರಿಪೇರಿ ಮಾಡಿಯೇ ಬಿಟ್ಟರು.
ಉದ್ಯೋಗ ಖಾತ್ರಿ ಯೋಜನೆ ಮೂಲಕ 20ಕ್ಕೂ ಅಧಿಕ ಸ್ಥಳೀಯರು ಜತೆಯಾದರು. ಸುಮಾರು 6 ಲಕ್ಷ ರೂ ವೆಚ್ಚದಲ್ಲಿ 128 ಮೀಟರ್ ಉದಕ್ಕೆ ಕಾಂಕ್ರೀಟ್ ಕಾರ್ಯ ಮಾಡಿ ಸೈ ಎನಿಸಿಕೊಂಡದ್ದು ಈಗ ಫಲ ನೀಡಿದೆ.