ವಿಧ್ಯಾರ್ಥಿಗಳಲ್ಲಿ ವ್ಯಕ್ತಿತ್ವ ನಿರ್ಮಾಣ, ನಾಯಕತ್ವ, ಪ್ರತಿಭಾ ಪುರಸ್ಕಾರ ನೀಡಿ ಗುರುತಿಸಿ ಗೌರವಿಸುವ ಕೆಲಸ ರೋಟರಿಯಂತಹ ಅಂತರಾಷ್ಟ್ರೀಯ ಸಂಸ್ಥೆಗಳಿಂದ ನಡೆದಿದೆ ಎಂದು ಬೊಂಡಾಲ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕಮಲಾಕ್ಷ ಕಲ್ಲಡ್ಕ ಹೇಳಿದರು.
ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ಸನ್ನದು ಪ್ರಧಾನ ಸಮಾರಂಭದಲ್ಲಿ ಸನ್ನದು ಸ್ವೀಕರಿಸಿ ಮಾತನಾಡಿದರು. ರೋಟರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಕೃತಿಕ ವಿನಿಮಯ ಯೋಜನೆಯಡಿಯಲ್ಲಿ ರಾಯಭಾರಿಯಾಗುವ ಅವಕಾಶಗಳನ್ನು ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಪಡೆದುಕೊಳ್ಳಬಹುದು ಎಂದು ರೋಟರಿ ಉಪಾಧ್ಯಕ್ಷರಾದ ಪಲ್ಲವಿ ಕಾರಂತ್ ಹೇಳಿದರು.
ಈ ಸಂದರ್ಭ ರೋಟರಿ ವತಿಯಿಂದ ಉಚಿತ ಕನ್ನಡಕ ವಿತರಣೆಯನ್ನು ಮಾಡಲಾಯಿತು.ಜೇಸಿಐ ಜೋಡುಮಾರ್ಗದ ನಿಕಟ ಪೂರ್ವ ಅಧ್ಯಕ್ಷರಾದ ಸವಿತಾ ನಿರ್ಮಲ್ ವಿಧ್ಯಾರ್ಥಿ ವೇತನ ವಿತರಣೆ ಹಾಗೂ ಮಕ್ಕಳಿಗೆ ಕೈ ತೊಳೆಯುವ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಬಳಿಕ ಕೈ ತೊಳೆಯುವ ಸಾಬೂನು ಮಕ್ಕಳಿಗೆ ವಿತರಣೆ ಮಾಡಲಾಯಿತು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾದ ಉಮೇಶ್ ನಿರ್ಮಲ್ ಅಧ್ಯಕ್ಷತೆ ವಹಿಸಿದ್ದರು. ಇಂಟರಾಕ್ಟ್ ಕ್ಲಬ್ ಸಂಯೋಜಕ ಶಿಕ್ಷಕ ಹರಿಪ್ರಸಾದ್ ಕುಲಾಲ್ ಸ್ವಾಗತಿಸಿದರು. ಇಂಟರಾಕ್ಟ್ ಕ್ಲಬ್ ಅಧ್ಯಕ್ಷರಾದ ಶ್ರೀವಿಧ್ಯಾ ವಂದಿಸಿದರು.