Categories: ಬಂಟ್ವಾಳ

ಪಿಂಚಣಿ, ಇತರ ಸೌಲಭ್ಯಗಳಿಗೆ ಆಧಾರ್ ಪರಿಗಣನೆಗೆ ವಿನಾಯಿತಿಗೆ ಒತ್ತಾಯ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಪಿಂಚಣಿ ಸಹಿತ ವಿವಿಧ ಸೌಲಭ್ಯಗಳಿಗೆ ಆಧಾರ್ ಕಾರ್ಡ್‌ನ ಜನ್ಮ ದಿನಾಂಕ ಪರಿಗಣಿಸದಂತೆ ಭವಿಷ್ಯ ನಿಧಿ ಕಚೇರಿಗೆ ನಿರ್ದೇಶನ ನೀಡಬೇಕು ಎಂದು ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಒತ್ತಾಯಿಸಿದ್ದಾರೆ.

ಈ ಕುರಿತು ಅವರು ಸಂಸದ ನಳಿನ್ ಕುಮಾರ್ ಕಟೀಲ್, ಪ್ರಾದೇಶಿಕ ಭವಿಷ್ಯನಿಧಿ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದು, ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನೀಡುತ್ತಿರುವ ವಿವಿಧ ಪಿಂಚಣಿ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್‌ನಲ್ಲಿರುವ ಜನ್ಮದಿನಾಂಕ ಮಾನದಂಡವಾಗಿ ಪರಿಗಣಿಸಿ ಸೌಲಭ್ಯ ನೀಡಲಾಗುತ್ತಿತ್ತು. ಇದರಿಂದ ಪ್ರಾರಂಭದಲ್ಲಿ ಆಧಾರ್ ಕಾರ್ಡ್ ಮಾಡಿಸುವಾಗ ಅಂದಾಜು ಪ್ರಕಾರ ಜನ್ಮ ದಿನಾಂಕ ನೀಡಿದವರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು. ಬೀಡಿ ಕಾರ್ಮಿಕರಿಗೆ ಇದರಿಂದ ತಮ್ಮ ವಯಸ್ಸಿನ ಮೇಲೆ ನಿವೃತ್ತಿ ಪಿಂಚಣಿ ಪಡೆಯಲು ತುಂಬಾ ತೊಂದರೆಯಾಗುತ್ತಿತ್ತು. ಸಾವಿರಾರು ಮಂದಿ ಅವಿದ್ಯಾವಂತ ಬೀಡಿ ಕಾರ್ಮಿಕರು ಆಧಾರ್ ಕಾರ್ಡ್‌ನಲ್ಲಿ ತಮ್ಮ ಜನ್ಮ ದಿನಾಂಕ ತಿದ್ದುಪಡಿ ಮಾಡಲು ಯಾವುದೇ ಮೂಲ ದಾಖಲೆ ಅಥವಾ ಪುರಾವೆಗಳಿಲ್ಲದೆ ಗೊಂದಲಕ್ಕೀಡಾಗಿದ್ದಾರೆ ಎಂದು ಅವರು ಮನವಿಯಲ್ಲಿ ವಿವರ ನೀಡಿದ್ದಾರೆ.

ಜನ್ಮ ದಿನಾಂಕದ ದಾಖಲೆಗಳಿದ್ದರೂ ಸಹ ೩ ವರ್ಷಕ್ಕಿಂತ ಹೆಚ್ಚಿನ ವ್ಯತ್ಯಾಸವಿದ್ದಲ್ಲಿ ತಿದ್ದುಪಡಿಗೆ ಅವಕಾಶ ಆಧಾರ್ ಕೇಂದ್ರದಲ್ಲಿ ನೀಡುತ್ತಿರಲಿಲ್ಲ. ಇದರಿಂದ ತುಂಬಾ ಜನರ ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ತಿದ್ದುಪಡಿಯಾಗದೆ ತಿರಸ್ಕೃತ ಗೊಳ್ಳುತ್ತಿತ್ತು. ಇದೀಗ ಕೇಂದ್ರ ಸರಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜ್ಙಾಪನ ಯು.ಐ.ಡಿ.ಎ.ಐ. ವಿಭಾಗೀಯ ಕಛೇರಿ ಬೆಂಗಳೂರು ಪತ್ರದಲ್ಲಿ ಹೊರಡಿಸಲಾದ ಆದೇಶದನ್ವಯ, ಯಾವುದೇ ಯೋಜನೆಗಳಿಗೆ ಆಧಾರ್ ಕಾರ್ಡ್ ಗುರುತು ಪತ್ರವೇ ಹೊರತಾಗಿ ಅದರಲ್ಲಿನ ಜನ್ಮ ದಿನಾಂಕವನ್ನು ಪುರಾವೆಯಾಗಿ ಯಾವುದೇ ಪಿಂಚಣಿ ಸಂಬಂಧಿಸಿದ ಯೋಜನೆಗಳಿಗೆ ಪರಿಗಣಿಸಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಅದರಂತೆ ರಾಜ್ಯ ಸರಕಾರದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ನಿರ್ದೇಶಕರು ಆಧಾರ್ ಕಾರ್ಡ್ ನಲ್ಲಿನ ಜನ್ಮ ದಿನಾಂಕ ಪರಿಗಣಿಸದಿರುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಆದರೆ ಬೀಡಿ ಕಾರ್ಮಿಕರಿಗೆ ತಮ್ಮ ತಮ್ಮ ಪಿಂಚಣಿ ಹಾಗೂ ಇತರ ಸೌಲಭ್ಯ ಪಡೆಯಲು ಬೀಡಿ ಕಾರ್ಮಿಕರ ಗುರುತು ಚೀಟಿಯಲ್ಲಿ ನಮೂದಿಸಿದ ಜನ್ಮದಿನಾಂಕಕ್ಕೆ ಆಧಾರ್ ಕಾರ್ಡ್‌ನಲ್ಲಿ ಸಹ ತಿದ್ದುಪಡಿ ಮಾಡಬೇಕು ಹಾಗೂ ಕೇಂದ್ರ ಸರಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಆದೇಶ ಕಾರ್ಮಿಕರ ಭವಿಷ್ಯ ನಿಧಿ ಕಛೇರಿಗೆ ಸಂಬಂಧಪಡುವುದಿಲ್ಲ ಎಂದು ಭವಿಷ್ಯ ನಿಧಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಸರಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶದಂತೆ ಆಧಾರ್ ಕಾರ್ಡ್‌ನಲ್ಲಿಯ ಜನ್ಮ ದಿನಾಂಕವನ್ನು ಪುರಾವೆಯಾಗಿ ಪರಿಗಣಿಸದಂತೆ ಸಂಬಂಧಪಟ್ಟ ಭವಿಷ್ಯ ನಿಧಿ ಪ್ರಾದೇಶಿಕ ಆಯುಕ್ತರಿಗೆ ಸೂಕ್ತ ನಿರ್ದೇಶನ ನೀಡುವಂತೆ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ