ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಔದಾರ್ಯ ಅಧ್ಯಾಪಕರಲ್ಲಿರಬೇಕು. ಹಾಗೆಯೇ ವಿದ್ಯಾರ್ಥಿಗಳು ನಕಾರಾತ್ಮಕ ಭಾವನೆಯನ್ನು ತೊರೆದು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ಬೆಳೆಯಲು ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲದೆ ಇತರೇ ಚಟುವಟಿಕೆಗಳಲ್ಲೂ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ (ಪರೀಕ್ಷಾಂಗ) ಪ್ರೊ.ವಿ. ರವೀಂದ್ರಾಚಾರಿ ನುಡಿದರು.
ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್‌ಕಾಲೇಜು ವಿಠೋಬ ವಿಠಲ ೨೦೧೯ ನೃತ್ಯ ಭಜನಾ ಸ್ಪರ್ಧೆ ಉದ್ಘಾಟಸಿ ಮಾತನಾಡಿದರು.
ಇಂದಿನ ಜನಾಂಗ ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ಮಾರು ಹೋಗುತ್ತಿರುವ ಸಂದರ್ಭದಲ್ಲಿ ಈ ವಿದ್ಯಾ ಸಂಸ್ಥೆಯು ಹಳೆಯದಾದ ಹಾಗೂ ಯುವ ಪೀಳಿಗೆಗೆ ಕಣ್ಮರೆಯಾಗಿರುವ ಕುಣಿತ ಭಜನೆ ಸ್ಪರ್ಧೆಯನ್ನು ಅಂತರ್ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿರುವುದು ವಿಶೇಷ ಮತ್ತು ವಿಭಿನ್ನವಾಗಿದೆ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಭ ಹಾರೈಸಿ, ಮುಂದಿನ ದಿನಗಳಲ್ಲಿ ಎಲ್ಲಾ ಕಾಲೇಜುಗಳಲ್ಲಿ ಇಂತಹ ಸ್ಪರ್ಧೆಗಳು ನಡೆಯಲಿ ಎಂದರು.
ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ ವಹಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಕಾರ್ಯಕ್ರಮದ ಪ್ರಸ್ತಾವನೆಗೈದರು. ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಒಟ್ಟು ೧೧ ಕಾಲೇಜುಗಳಿಂದ ೧೧ ತಂಡ ಭಾಗವಹಿಸಿತ್ತು. ತೀರ್ಪುಗಾರರಾಗಿ ರಂಗಭೂಮಿ ಕಲಾವಿದ ಮೌನೇಶ್ ವಿಶ್ವಕರ್ಮ, ವಿವೇಕಾನಂದ ಬಿಎಡ್ ಕಾಲೇಜಿನ ಉಪನ್ಯಾಸಕಿ ಡಾ| ಶೋಭಿತಾ ಸತೀಶ್, ಯೋಗೀಶ್ ಶಂಭೂರು, ಪ್ರಶಾಂತ್ ನರಿಕೊಂಬು ಆಗಮಿಸಿದ್ದರು. ವಿದ್ಯಾರ್ಥಿಗಳಾದ ಸಂತೋಷ್ ಸ್ವಾಗತಿಸಿ, ವರದರಾಜ್ ವಂದಿಸಿ, ತ್ರಿವೇಣಿ ಕಾರ್ಯಕ್ರಮವನ್ನು ನಿರೂಪಿಸಿದರು.