ಸುದ್ದಿ, ಲೇಖನಗಳಿಗೆ ಕ್ಲಿಕ್ ಮಾಡಿರಿ www.bantwalnews.com
ರಾತ್ರಿ, ಹಗಲೆಂಬ ಪರಿವೆ ಇಲ್ಲ, ಪೊಳಲಿಯತ್ತ ಹರಿಯುತ್ತಿದೆ ಭಕ್ತಜನಸಾಗರ. ಇದು ಸೋಮವಾರ ಮಾರ್ಚ್ 4ರಿಂದ ಆರಂಭಗೊಂಡು, ಮುಂದಿನ ಬುಧವಾರ ಮಾರ್ಚ್ 13ರವರೆಗೆ ನಡೆಯುವ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂಭ್ರಮದ ಕ್ಷಣಗಳು. 10ರಂದು ಪ್ರತಿಷ್ಠೆ, 13ರಂದು ನಡೆಯುವ ಬ್ರಹ್ಮಕಲಶಾಭಿಷೇಕ ಸಮಾರಂಭಕ್ಕೆ ಭಕ್ತರ ದಂಡೇ ಬರುತ್ತಿದೆ.
ಒಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ. ಇನ್ನೊಂದೆಡೆ ವಿಶಾಲವಾದ ಚಪ್ಪರದಡಿ ಅನ್ನಪ್ರಸಾದ. ಮತ್ತೊಂದೆಡೆ ದೇವರ ದರ್ಶನ ಹಾಗೂ ಜೀರ್ಣೋದ್ಧಾರಗೊಂಡ ದೇಗುಲದ ವೈಭವ ನೋಡಲು ಕುತೂಹಲಿಗರು. ವಿಶಾಲವಾದ ಉಗ್ರಾಣದಲ್ಲಿ ಅಕ್ಕಿ, ತರಕಾರಿಗಳ ಸಾಲು, ಪಾಕಶಾಲೆಯಲ್ಲಿ ಸಿದ್ಧವಾಗುತ್ತಿರುವ ತಿಂಡಿ, ಪಾನೀಯ, ಅನ್ನಪ್ರಸಾದ. ಎಲ್ಲವೂ ಅಚ್ಚುಕಟ್ಟು. ಒಂದು ಕಡ್ಡಿ, ಕಸವೂ ಬೀಳದಂತೆ ಎತ್ತಿಡುವ ಸ್ವಯಂಸೇವಕರು. ಎಲ್ಲವೂ ಪೊಳಲಿಯಮ್ಮನ ಪಾದಕಮಲಗಳಿಗೆ ಅರ್ಪಣೆ ಎಂಬ ಸಂಘಟಕರು. ಹೀಗೆ ಪೊಳಲಿಯಲ್ಲಿದೆ ವ್ಯವಸ್ಥಿತ ಸಂಘಟನೆ.
ದೇವಸ್ಥಾನದ ಜೀರ್ಣೋದ್ಧಾರದ ಬಳಿಕ ನಡೆಯುವ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ವೈದಿಕರ ತಂಡ ಸಕಲ ಧಾರ್ಮಿಕ ಕಾರ್ಯಗಳಲ್ಲಿ ನಿರತವಾಗಿದ್ದರೆ, ಹೊರಗೆ ವಾಹನ ನಿಲುಗಡೆಯಿಂದ ನೀರು ಪೂರೈಕೆವರೆಗೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಸ್ವಯಂಸೇವಕರು ತೊಡಗಿಸಿಕೊಂಡಿದ್ದಾರೆ. ಒಳಗೆ ಪ್ರವೇಶಿಸುವಾಗಲೇ ಬಣ್ಣ ಬಣ್ಣದ ವಸ್ತ್ರಾಲಂಕಾರದೊಂದಿಗೆ ಚಪ್ಪರಗಳು ನಿರ್ಮಾಣಗೊಂಡು ಬಿಸಿಲಿಗೆ ಆಸರೆಯಾದರೆ, ಹಗಲು, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಉಪನ್ಯಾಸಗಳು ನೋಡುಗನ ಕಣ್ಣನ್ನಷ್ಟೇ ಅಲ್ಲ, ವೈಚಾರಿಕ ಅರಿವನ್ನೂ ಒದಗಿಸುತ್ತದೆ.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸ್ವಚ್ಛತೆಗೆ ಗರಿಷ್ಠ ಆದ್ಯತೆ ದ್ರವ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಅಳವಡಿಸಲಾಗಿದೆ. ಸುಮಾರು ೫೦ ಸಾವಿರ ಲೀಟರ್ ಸಾಮರ್ಥ್ಯದ ದ್ರವ ತ್ಯಾಜ್ಯ ಘಟಕವನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಕೈತೊಳೆದ ನೀರು, ಅಡುಗೆ ತಯಾರಿ ವಸತಿಗೃಹ, ಕಲ್ಯಾಣ ಮಂಟಪದ ತ್ಯಾಜ್ಯ ನೀರು, ಶೌಚಗೃಹಗಳ ತ್ಯಾಜ್ಯನೀರನ್ನು ಎಲ್ಲೂ ಹೊರಗೆ ಹರಿಯಲು ಬಿಡದೆ ಸಂಸ್ಕರಣೆ ಮಾಡಲಾಗುತ್ತದೆ.
ಪೊಳಲಿ ಮಾತೆಯ ಎದುರು ಶ್ರೀಮಂತ, ಬಡವ ಎಂಬ ತಾರತಮ್ಯವಿಲ್ಲ. ಪೊಳಲಿಯಲ್ಲಿ ನಿಂತು ನಾನೇ, ನನ್ನಿಂದಲೇ ಎನ್ನುವವರನ್ನು ಭಕ್ತರು ಮರುಕದಿಂದ ನೋಡುತ್ತಾರೆ. ಏಕೆಂದರೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಎದುರು ಎಲ್ಲರೂ ತೃಣಮಾತ್ರರು ಎಂಬ ಸಿದ್ಧಾಂತದಡಿ ಭಕ್ತರು ಇಲ್ಲಿ ನಡೆದುಕೊಳ್ಳುತ್ತಾರೆ.
12ರಂದು ಸಿಎಂ ಭೇಟಿ:
ಪ್ರತಿದಿನ ಧಾರ್ಮಿಕ ಕಾರ್ಯಕ್ರಮದಲ್ಲಿ ನಾನಾ ಸ್ವಾಮೀಜಿಗಳು, ಗಣ್ಯರು ಭಾಗವಹಿಸುತ್ತಾರೆ. ಹಲವು ವಿಚಾರ ಪ್ರಚೋದಕ ಭಾಷಣಗಳು ಇಲ್ಲಿ ನಡೆಯುತ್ತವೆ. ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರು ಅಂದು ಸಂಜೆ 6ರಿಂದ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಅಧ್ಯಕ್ಷತೆಯನ್ನು ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆ ವಹಿಸುವರು.
ಚಿತ್ರಕೃಪೆ: ವಾಮನ ಪೂಜಾರಿ, ಪೊಳಲಿ, https://www.facebook.com/SriPolali/
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…