ಮಾಣಿ ಕರ್ನಾಟಕ ವಿದ್ಯಾ ಸಂಸ್ಥೆಯ ನೂತನ ಕಟ್ಟಡವು ರೋಟರಿ ಕ್ಲಬ್ ಬಂಟ್ವಾಳ ಸಹಕಾರದೊಂದಿಗೆ ಲೋಕಾರ್ಪಣೆ, ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಮಾ. 9ರಂದು ಶಾಲಾ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಣಿ ಶಾಲೆಯ ಆಡಳಿತ ಸಮಿತಿಯ ಸದಸ್ಯ ಕೆ.ಎನ್.ಗಂಗಾಧರ್ ಆಳ್ವ ತಿಳಿಸಿದ್ದಾರೆ.
ಗುರುವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಂಟ್ವಾಳ ರೋಟರಿ ಕ್ಲಬ್, ದಿ. ಉರ್ದಿಲಗುತ್ತು ಇಂದುಹಾಸ ರೈ ಕುಟುಂಬಸ್ಥರು, ದಿ. ಹಾಜಿ ಹುಸೈನ್ ಸುಲ್ತಾನ್ ಬೀಡಿ ಹಾಗೂ ದಾನಿಗಳ ಸಹಾಯದಿಂದ ಸುಮಾರು ೩೨ ಲಕ್ಷ ರೂ. ವೆಚ್ಚದಲ್ಲಿ ನೂತನ ಆಂಗ್ಲ ಮಾಧ್ಯಮ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ರೋಟರಿಯ ನಿಯೋಜಿತ ಗವರ್ನರ್ ರಂಗನಾಥ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಸಭಾಧ್ಯಕ್ಷತೆ ವಹಿಸುವರು. ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ, ಜಿಲ್ಲಾ ಉಪನಿರ್ದೇಶಕ ಶಿವರಾಮಯ್ಯ, ಕ್ಷೇತ್ರ ಶೀಕ್ಷಣಾಧಿಕಾರಿ ಶಿವಪ್ರಕಾಶ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಶಾಲೆಯ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ ಪಿ. ಗಂಗಾಧರ ರೈ ಅವರ ಬೀಳ್ಕೊಡುಗೆ ಸಮಾರಂಭ ಹಾಗೂ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ನಡೆಯಲಿದೆ ಎಂದು ಹೇಳಿದರು.
ಶಾಲೆಯು ೩೮ ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಾರ್ಥಕ ಸಾಧನೆಗಳನ್ನು ಮಾಡಿದ್ದು, ಪ್ರಸ್ತುತ ೪೫೦ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು, ಸುಮಾರು ೩೦ಮಂದಿ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ, ಮಾಣಿ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ಕಾರ್ಯದರ್ಶಿ ಇಬ್ರಾಹಿಂ, ಬಂಟ್ವಾಳ ರೋಟರಿ ಕ್ಲಬ್‌ನ ಕಾರ್ಯದರ್ಶಿ ಶಿವಾನಿ ಬಾಳಿಗ ಉಪಸ್ಥಿತರಿದ್ದರು.