ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಮಾಹಿತಿ
ಬಂಟ್ವಾಳ: ಗ್ರಾಮೀಣ ಮಟ್ಟದಲ್ಲಿ ರೈತಸಮ್ಮಾನ್ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು ಯಾವುದೇ ಗೊಂದಲ ಬೇಡ ಎಂದು ಬಂಟ್ವಾಳ ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ ಹೇಳಿದರು.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಶುಕ್ರವಾರದವರೆಗೆ 2068 ಅರ್ಜಿಗಳು ಈ ವಿಷಯಕ್ಕೆ ಸಂಬಂಧಿಸಿ ನೋಂದಾವಣಿ ಆಗಿದೆ. ಆದರೆ ಎಲ್ಲದಕ್ಕೂ ತಾಲೂಕು ಕೇಂದ್ರಕ್ಕೆ ರೈತರು ಬರಬೇಕು ಎಂದೇನೂ ಇಲ್ಲ. ಗ್ರಾಮಮಟ್ಟದಲ್ಲಿರುವ ಬಾಪೂಜಿ ಸೇವಾ ಕೇಂದ್ರ, ರೈತ ಸಂಪರ್ಕ ಕೇಂದ್ರ, ಅಟಲ್ ಜೀ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆ ಸಾಧ್ಯ. ಇದಕ್ಕಾಗಿಯೇ ಗ್ರಾಮಮಟ್ಟದ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದ್ದು, ಅವರಿಗೆ ಈ ಯೋಜನೆಯ ಕುರಿತು ಮಾಹಿತಿ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಅಧಿಕಾರಿಗಳಿಗೆ ಈ ಸಂದರ್ಭ ಸೂಚನೆ ನೀಡಿದ ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಯಾವುದೇ ಸರಕಾರಿ ಯೋಜನೆಗಳು ಲ್ಯಾಪ್ಸ್ ಆಗದಂತೆ ಕಾರ್ಯನಿರ್ವಹಿಸಿ ಎಂದು ಕಿವಿಮಾತು ಹೇಳಿದರು.
ಪಿಡಬ್ಲುಡಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೈ.ಉಮೇಶ್ ಭಟ್ ಇಲಾಖೆಯ ಪ್ರಗತಿಯ ವಿವರಗಳನ್ನು ನೀಡಿ, ಆಗಬೇಕಾದ ರಸ್ತೆ ಕಾಮಗಾರಿಗಳ ಪಟ್ಟಿಯನ್ನು ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳಾದ ಬಿ.ಸುರೇಶ್, ಪ್ರವೀಣ್ ಜೋಷಿ, ನಾರಾಯಣ ಭಟ್, ಸುಧಾ ಜೋಷಿ, ಮಲ್ಲಿಕಾ, ಶಿವಪ್ರಕಾಶ್, ದೀಪಾ ಪ್ರಭು, ನೋಣಯ್ಯ ತಮ್ಮ ಇಲಾಖೆಗಳ ಮಾಹಿತಿಗಳನ್ನು ಒದಗಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಸಲಹೆ ಸೂಚನೆಗಳನ್ನು ನೀಡಿದರು. ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ ಹಾಜರಿದ್ದರು.