ವಿಟ್ಲ: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಪಾಡಂತರ ಮರ್ಕಝ್ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಅಂತಾರಾಜ್ಯ ಮುಹ್ಯಿಸ್ಸುನ್ನ ಸ್ಟೂಡೆಂಟ್ಸ್ ಫೆಸ್ಟ್ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಟ್ಲ ಸಮೀಪದ ಉಕ್ಕುಡ ದರ್ಸ್ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ಬಾಚಿಕೊಳ್ಳುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಎಂಬ ವಿದ್ವಾಂಸ ಒಕ್ಕೂಟದ ಕಾರ್ಯದರ್ಶಿ ಹಾಗೂ ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷರಾದ ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್ ಇವರ ಶಿಷ್ಯಂದಿರ ನೇತೃತ್ವದಲ್ಲಿ ಭಾರತದಾದ್ಯಂತವಿರುವ ಮುಹ್ಯಿಸ್ಸುನ್ನ ದರ್ಸ್‌ಗಳ ಸುಮಾರು ಎರಡು ಸಾವಿರದಷ್ಟು ಪ್ರತಿಭೆಗಳು ಸ್ಟೂಡೆಂಟ್ಸ್ ಫೆಸ್ಟಿನಲ್ಲಿ ಭಾಗವಹಿಸಿದ್ದರು. ಸಬ್ ಜೂನಿಯರ್ ವಿಭಾಗದ ಕಿತಾಬ್ ಟೆಸ್ಟ್ ಸ್ಪರ್ಧೆಯಲ್ಲಿ ಉಕ್ಕುಡ ದರ್ಸ್ ವಿದ್ಯಾರ್ಥಿಗಳಾದ ಮುಹಮ್ಮದ್ ಪಕ್ಷಿಕೆರೆ ಪ್ರಥಮ ಹಾಗೂ ಯಾಸಿರ್ ಉಕ್ಕುಡ ತೃತೀಯ ಸ್ಥಾನ ಪಡೆದಿದ್ದಾರೆ. ಬೈತ್ ಸ್ಪರ್ಧೆಯಲ್ಲಿ ಮುಹಮ್ಮದ್ ಕೈಸ್ ಉಳ್ಳಾಲ ಟಾಪ್ ಟೆನ್ ಆಗಿ ಆಯ್ಕೆಯಾದರು. ಸ್ಪರ್ಧೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಉಕ್ಕುಡ ಬದ್ರಿಯಾ ಜುಮಾ ಮಸ್ಜಿದ್, ಮುರ್ಶಿದುಲ್ ಅನಾಂ ಸ್ವಲಾತ್ ಕಮಿಟಿ ಹಾಗೂ ಜಲಾಲಿಯ್ಯ ಕಮಿಟಿಗಳ ವತಿಯಿಂದ ಮಸ್ಜಿದ್ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.