ಒಂದು ಕಾಲದಲ್ಲಿ ಬಿಜೆಪಿಯ ಪ್ರಖರ ವಾಗ್ಮಿ ಎಂದೇ ಹೆಸರಾಗಿದ್ದ, ಲೋಕಸಭೆಯ ಮಂಗಳೂರು ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದ, ಕಾಂಗ್ರೆಸ್ ಪಕ್ಷದ ಬಲಿಷ್ಠ ನಾಯಕ ಜನಾರ್ದನ ಪೂಜಾರಿಯವರನ್ನು ಸತತವಾಗಿ ಸೋಲಿಸಿದ್ದ, ಬಿಜೆಪಿಯ ನಾಯಕರಾಗಿ ಬಳಿಕ ಇತರ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ಕೇಂದ್ರ ಮಾಜಿ ಸಚಿವ, ಮಾಜಿ ಸಂಸದ ವಿ.ಧನಂಜಯ ಕುಮಾರ್ ಮಾ.4ರಂದು ಕೊನೆಯುಸಿರೆಳೆದಿದ್ದಾರೆ.
www.bantwalnews.com Editor: Harish Mambady
ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿ. ಧನಂಜಯ ಕುಮಾರ್ (68) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾ.4ರಂದು ನಿಧನರಾದರು.
ವಿ.ಧನಂಜಯ ಕುಮಾರ್ ಮೂಲತಃ ವೇಣೂರಿನವರು. ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಪದವಿ ಪಡೆದು ಮಂಗಳೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದ ಅವರು ಜನಸಂಘದ ಮೂಲಕ ರಾಜಕೀಯ ಪ್ರವೇಶ ಮಾಡಿದರು.
ಬಿಜೆಪಿ ಮಂಗಳೂರು ವಿಧಾನ ಸಭೆ ಕ್ಷೇತ್ರದ ಅಧ್ಯಕ್ಷ, ಯುವ ಮೋರ್ಚಾ ರಾಜ್ಯಾಧ್ಯಕ್ಷ, ಅಖಿಲ ಭಾರತ ಯುವ ಮೋರ್ಚಾ ಉಪಾಧ್ಯಕ್ಷ ಸಹಿತ ಅನೇಕ ಹುದ್ದೆಗಳನ್ನು ನಿರ್ವಹಿಸಿದವರು. 1996ರಲ್ಲಿ ವಾಜಪೇಯಿ ಅವರ 13 ದಿನಗಳ ಸರಕಾರದಲ್ಲಿ ಧನಂಜಯ ಕುಮಾರ್ ವಿಮಾನಯಾನ ಖಾತೆ ಸಚಿವರಾದರು. 1998ರಲ್ಲಿ ಕೇಂದ್ರದಲ್ಲಿ ಮತ್ತೆ ವಾಜಪೇಯಿ ನೇತೃತ್ವದ ಎನ್‍ಡಿಎ ಸರಕಾರದಲ್ಲಿ ಧನಂಜಯ ಕುಮಾರ್ ಹಣಕಾಸು ರಾಜ್ಯ ಸಚಿವರಾಗಿ ಆಯ್ಕೆಯಾಗಿದ್ದರು. ಬಳಿಕ ಜವಳಿ ಖಾತೆಗೆ ವರ್ಗಾಯಿಸಲಾಯಿತು.
1991ರ ಲೋಕಸಭೆ ಚುನಾವಣೆಯಲ್ಲಿ ಧನಂಜಯ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ವಿರುದ್ಧ ಗೆಲವು ದಾಖಲಿಸಿದರು. ಬಳಿಕ 1996, 1998, 1999ರಲ್ಲೂ ಅವರು ಜಯ ಸಾಧಿಸಿದರು. 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಸರಕಾರದ ದಿಲ್ಲಿ ವಿಶೇಷ ಪ್ರತಿನಿಧಿಯಾಗಿದ್ದರು. ಬಿ.ಎಸ್.ಯಡಿಯೂರಪ್ಪ 2013ರಲ್ಲಿ ಕೆಜೆಪಿ ಪಕ್ಷ ಕಟ್ಟಿದ್ದ ಸಂದರ್ಭ ಧನಂಜಯ ಕುಮಾರ್ ಕೆಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಆ ಸಂದರ್ಭ ಯಡಿಯೂರಪ್ಪ ಅವರ ಪರ ವಹಿಸಿ ಬಿಜೆಪಿ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ್ದ ಧನಂಜಯ ಕುಮಾರ್ ಗೆ ಯಡಿಯೂರಪ್ಪ ಅವರು ಬಿಜೆಪಿ ಮರಳಿದರೂ ಇವರಿಗೆ ಬಿಜೆಪಿ ಬಾಗಿಲು ತೆರೆಯಲಿಲ್ಲ. ಬಳಿಕ ಜೆಡಿಎಸ್ ಸೇರ್ಪಡೆಗೊಂಡು 2014ರ ಲೋಕಸಭೆ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಕಣಕ್ಕಿಳಿದಿದ್ದರು.