ಸರಕಾರಿ ಶಾಲೆ ಅಭಿವೃದ್ಧಿ ಮಾಡೋಣ – ಬಲೇ ಚಾ ಪರ್ಕ

ಶತಮಾನದತ್ತ ಸಾಗುತ್ತಿರುವ ಸರಕಾರಿ ಶಾಲೆಗೆ ಬಲೇ ಚಾ ಪರ್ಕ ಎಂಬ ಟೈಟಲ್ ಇಟ್ಟು ಶಾಲಾಭಿವೃದ್ಧಿಗೆ ಹಳೇ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಕೆಲಸವಾಗುತ್ತಿದೆ. ಇದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ , ಅಜ್ಜಿಬೆಟ್ಟು,
  • ಲೇಖನ: ಯಾದವ ಕುಲಾಲ್, ಅಗ್ರಬೈಲು
  • ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ
ಅಜ್ಜಿಬೆಟ್ಟಿನಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಾವಿರಾರು ಮಂದಿಯನ್ನು ಉನ್ನತ ಸ್ಥಾನಕ್ಕೇರಿಸಲು ಬಹುಮುಖ್ಯ ಪಾತ್ರ ವಹಿಸಿದೆ. ಇಲ್ಲಿ ಕಲಿತವರು ದೊಡ್ಡ ಹುದ್ದೆಗಳಲ್ಲಿದ್ದಾರೆ. ಅವರನ್ನೆಲ್ಲ ಒಟ್ಟುಗೂಡಿಸುವುದು ಹೇಗೆ, ಥಟ್ಟನೆ ಹೊಳೆದದ್ದು ಒಂದು ಚಹಾಕೂಟ. ತುಳು ಭಾಷೆಯಲ್ಲಿ ಬಲೇ ಚಾ ಪರ್ಕ ಎಂದರೆ ಮುಗೀತು. ಒಟ್ಟಾಗಿ ಚಹ ಕುಡಿಯುಲು ಆಹ್ವಾನ ಎಂದೇ ಅರ್ಥ. ದಶಕಗಳ ಹಿಂದೆ ಖ್ಯಾತ ನಾಟಕಕಾರ ದೇವದಾಸ ಕಾಪಿಕಾಡ್ ಅವರ ಬಲೇ ಚಾ ಪರ್ಕ ಸೂಪರ್ ಹಿಟ್ ನಾಟಕವಾಗಿತ್ತು. ಇದೀಗ ಶಾಲೆಯಲ್ಲಿ ಕಲಿತ ಹಳೇ ವಿದ್ಯಾರ್ಥಿಗಳನ್ನು ಒಟ್ಟುಕೂಡಿಸಿದಂತಾಯಿತು, ಹಾಗೆಯೇ ಚಾ ಪರ್ಕ ದ ಮೆಲುಕುಗಳನ್ನು ಮತ್ತೊಮ್ಮೆ ಕಂಡಂತಾಯಿತು ಎಂಬ ಆಶಯದೊಂದಿಗೆ ಶಾಲೆಯಲ್ಲಿ ಮಾ.3ರಂದು ಕಾರ್ಯಕ್ರಮ ನಡೆಯಲಿದೆ. ತೆಲಿಕೆದ ಬೊಳ್ಳಿ ದೇವದಾಸ ಕಾಪಿಕಾಡ್ ಅವರೇ ಅತಿಥಿ.
ಬಿ.ಸಿ.ರೋಡಿನ ಹೃದಯಭಾಗವಾದ ಪಿಂಟೋ ಕಾಂಪ್ಲೆಕ್ಸ್ ಇರುವ ಜಾಗದಲ್ಲಿ ಖಾಸಗಿ ಕಟ್ಟಡದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂಭಗೊಂಡಿತ್ತು. 45 ವರ್ಷಗಳ ಕಾಲ ಅಲ್ಲೇ ಕಾರ್ಯ ನಿರ್ವಹಿಸಿ ಬಳಿಕ ಅದೇ ಶಾಲೆಯು ಬಿ.ಮೂಡ ಗ್ರಾಮದ ಅಜ್ಜಿಬೆಟ್ಟುವಿನಲ್ಲಿ ಸರಕಾರಿ ಸ್ವಂತ ಜಾಗ ಪಡೆದು ಸ್ವಂತ ಕಟ್ಟಡ ನಿರ್ಮಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡುವ ಮೂಲಕ ಜ್ಞಾನ ದೇಗುಲವಾಗಿದೆ.
ಆದರೆ ಕಳೆದ 5 ವರ್ಷಗಳ ಹಿಂದೆ ವಿದ್ಯಾರ್ಥಿಗಳ ಸಂಖ್ಯೆ ತೀವ್ರ ಕುಸಿತ ಕಂಡಿದ್ದು ಶಾಲೆಯು ಮುಚ್ಚುವ ಸ್ಥಿತಿಯಲ್ಲಿತ್ತು. ನಂತರ ಕಳೆದ ಮೂರು ವರ್ಷಗಳಿಂದ ಸರಕಾರದ ಆದೇಶದಂತೆ ಇದೇ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್‌ಕೆಜಿ, ಯುಕೆಜಿ – ಚಿಣ್ಣರ ಮನೆ ಆರಂಭಿಸಲಾಯಿತು.1ನೇ ತರಗತಿಯಿಂದ 5ನೇ ತರಗತಿ ವರೆಗಿನ ಮಕ್ಕಳಿಗೆ ಇಂಗ್ಲೀಷ್ ಭಾಷೆಯನ್ನು ಪ್ರಮುಖವಾಗಿ ಸ್ಮಾರ್ಟ್ ಕ್ಲಾಸ್ ಮೂಲಕ ಕಲಿಸು ವ್ಯವಸ್ಥೆ ಮಾಡಲಾಯಿತು ಹಾಗೂ 6ನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿಯನ್ನಾಗಿ ಆರಂಭಿಸಿ ಆಂಗ್ಲ ಮಾಧ್ಯಮಗಳ ಶಾಲೆಗಳಿಗೆ ಪೈಪೋಟಿಯಾಗಿ ನಿಂತಿತು. ಬ್ರಹ್ಮರಕೂಟ್ಲು, ತಲಪಾಡಿ, ಅಲೆತ್ತೂರು, ಕೈಕುಂಜೆ, ಮಯ್ಯರಬೈಲು, ಕಾಮಾಜೆ, ಮೊಡಂಕಾಪು, ಗೂಡಿನಬಳಿ ಹೀಗೆ ಬೇರೆ ಬೇರೆ ಕಡೆಯಿಂದ ವಿದ್ಯಾರ್ಥಿಗಳು ಬರುತ್ತಿದ್ದು ಈಗ ಮಕ್ಕಳ ಸಂಖ್ಯೆ ಏರಿಕೆಯಾಗಿದೆ. ಬಂಟ್ವಾಳ ರೋಟರಿ ಕ್ಲಬ್ ಸಹಕಾರದಿಂದ ಶಾಲೆಯ ಗೌರವ ಶಿಕ್ಷಕಿಯರಿಗೆ ಗೌರವ ಧನ ನೀಡುತ್ತಾ ಇದೆ ಹಾಗೂ ಶಾಲೆಯ ಎಲ್ಲಾ ಕೊಠಡಿಗಳಿಗೆ ಟೈಲ್ಸ್ ಅಳವಡಿಸಿ ಪೈಂಟ್ ಬಳಿದು ಆಕರ್ಷಕಗೊಳಿಸಿದೆ. ಹಿಂದೂಸ್ತಾನ್ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಸಭಾಂಗಣಕ್ಕೆ ಟೈಲ್ಸ್ ಅಳವಡಿಸಲಾಗಿದೆ. ಉತ್ತಮ ಶಿಕ್ಷಕರ ಬಳಗವನ್ನೂ ಹೊಂದಿದೆ. ವಿಶಾಲವಾದ ಮೈದಾನ ಹೊಂದಿದ್ದು ಅನೇಕ ಕ್ರೀಡಾಪಟುಗಳಿಗೂ ಈ ಶಾಲಾ ಮೈದಾನವೇ ವರದಾನವಾಗಿದೆ. ಈ ಶಾಲೆಯ ಬಳಿಯೇ ಸರಕಾರಿ ಪ್ರೌಢ ಶಾಲೆಯೂ ಇದ್ದು ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭಾಸಕ್ಕೆ ದೂರದ ಶಾಲೆಯನ್ನು ಅವಲಂಬಿಸುವ ಪ್ರಸಂಗವೂ ಬರುವುದಿಲ್ಲ.
ಆದರೂ ಶಾಲೆಯಲ್ಲಿ ಇನ್ನೂ ಅಭಿವೃದ್ಧಿ ಪೂರಕವಾದ ಅನುದಾನಗಳ ಅಗತ್ಯವೂ ಇದೆ. ಶಾಲಾ ಮೈದಾನವನ್ನು ಸಂಪೂರ್ಣ ಅಭಿವೃದ್ಧಿಗೊಳಿಸುವುದು ಮತ್ತು ಅದರ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಸುವುದು, ಶಾಲಾ ಅಂಗಳಕ್ಕೆ ಇಂಟರ್‌ಲಾಕ್ ಅಳವಡಿಸುವುದು, ಶಾಲೆಯ ಮಾಡಿನ ದುರಸ್ಥಿಯ ಅಗತ್ಯವಿದೆ. ಶಾಲೆಗೆ ಸಮರ್ಪಕವಾದ ರಂಗಮಂದಿರ ನಿರ್ಮಾಣ, ಶಾಲಾ ಲೈಬ್ರೇರಿ ಕೊಠಡಿ ನಿರ್ಮಾಣ, ಮಕ್ಕಳಿಗೆ ನೂತನ ಶೌಚಾಲಯಗಳ ನಿರ್ಮಾಣ ಹಾಗೂ ಮೂರು ಗೌರವ ಶಿಕ್ಷಕರುಗಳಿಗೆ ವಾರ್ಷಿಕ ಗೌರವ ಧನ ವ್ಯವಸ್ಥೆಯೂ ಅಗತ್ಯ ಇದೆ. ಒಟ್ಟಿನಲ್ಲಿ ‘ಬಲೇ ಚಾಪರ್‍ಕ’ ವಿನೂತನ ಕಾರ್ಯಕ್ರಮ ಶಾಲಾಭಿವೃದ್ಧಿಗೆ ಪೂರಕವಾದ ಯೋಜನೆಗೆ ಸಹಕಾರಿಯಗಲಿ.
ಶತಮಾನದತ್ತ ಸಾಗುತ್ತಿರುವ ಅಜ್ಜಿಬೆಟ್ಟುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆ ಇಲ್ಲ. ಬಿ.ಸಿ.ರೋಡು ನಗರದಿಂದಲೇ ಕಾಂಕ್ರೀಟ್ ರಸ್ತೆ, ವಿಶಾಲವಾದ ಶಾಲಾ ಮೈದಾನ, ನುರಿತ ಶಿಕ್ಷಕರು, ಉತ್ತಮ ದರ್ಜೆಯ ಸಮವಸ್ತ್ರಗಳನ್ನು ನೀಡಲಾಗುತ್ತಿದೆ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ನಿರ್ವಹಿಸಿಕೊಂಡು ಬರುತ್ತಿದ್ದು ಭಾರತದ ಉತ್ತಮ ಪ್ರಜೆಯಾಗಿ ಬಾಳುತ್ತಿದ್ದಾರೆ. ಸರಕಾರಿ ಶಾಲಾ ಆಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳೇ ಜೀವಾಳ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಳೆವಿದ್ಯಾರ್ಥಿಗಳು ಬಂದು ‘ಬಲೇ ಚಾ ಪರ್‍ಕ’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎನ್ನುತ್ತಾರೆ ಶಾಲೆ ಹಳೇ ವಿದ್ಯಾರ್ಥಿ ಹಾಗೂ ಗೌರವಾಧ್ಯಕ್ಷ ಡಾ. ರಮೇಶಾನಂದ ಸೋಮಯಾಜಿ.
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಮುಚ್ಚುವ ಸ್ಥಿತಿಯಲ್ಲಿದ್ದ ನಮ್ಮ ಶಾಲೆಗೆ ಈಗ ಸ್ಥಳೀಯ ಸಹಕಾರ ಹಾಗೂ ಸ್ಥಳೀಯ ಸಂಘ-ಸಂಸ್ಥೆಯ ನೆರವಿನಿಂದ ಮತ್ತೆ ಮರುಜೀವ ಬಂದಂತಾಗಿದೆ. ಆದರೂ ಇನ್ನೂ ಅನೇಕ ಅಭಿವೃದ್ಧಿಗೆ ಆಗಬೇಕಾಗಿದೆ. ಹಳೆ ವಿದ್ಯಾರ್ಥಿಗಳೇ ಸರಕಾರಿ ಶಾಲೆಯ ಜೀವಾಳ. ಅವರ ಸಹಕಾರದಿಂದ ಶಾಲೆಯ ಅಭಿವೃದ್ಧಿಗೆ ಇನ್ನೂ ಸಹಕಾರಿಯಾಗಲಿ ಎನ್ನುತ್ತಾರೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶ್ರೀಧರ ಅಮೀನ್.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ