ಪಡಿ ಸಂಸ್ಥೆ ಮಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಬಂಟ್ವಾಳ ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರ ಬಂಟ್ವಾಳ ಆಶ್ರಯದಲ್ಲಿ ಕಾವಳಮೂಡೂರು ಗ್ರಾಮ ಪಂಚಾಯತು ವ್ಯಾಪ್ತಿಯ ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಿಗೆ ಶಾಲಾ ಅಭಿವೃದ್ಧಿ ಯೋಜನೆ ತಯಾರಿ ಮತ್ತು ಮಕ್ಕಳ ರಕ್ಷಣಾ ನೀತಿ ಕುರಿತು ತರಬೇತಿ ಕಾರ್ಯಗಾರ ನಡೆಯಿತು.
ಪಡಿ ಸಂಸ್ಥೆಯ ತರಬೇತುದಾರ ಗೋಪಾಲ ಅಂಚನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಾಲೆಯಲ್ಲಿರಬೇಕಾದ ಮೂಲಭೂತ ಸೌಲಭ್ಯಗಳು, ಸಮುದಾಯದ ಸಹಭಾಗಿತ್ವದೊಂದಿಗೆ ನಡೆಸಬಹುದಾದ ಚಟುವಟಿಕೆಗಳು, ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವ ತಂತ್ರಗಳು, ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಕುಂದುಕೊರತೆಗಳ ನಿವಾರಣೆ ಮೊದಲಾದ ವಿಷಯಗಳಲ್ಲಿ ಮಾಹಿತಿ ನೀಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಡಿ ಕಾವಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಚಂದಪ್ಪ ಪೂಜಾರಿ ಮಕ್ಕಳ ರಕ್ಷಣಾ ನೀತಿ ಬಗ್ಗೆ ಮಾಹಿತಿ ನೀಡಿದರು.
ಪಡಿ ಸಂಸ್ಥೆಯ ಸಂಯೋಜಕಿ ರಾಜೇಶ್ವರಿ, ಮುಖ್ಯ ಶಿಕ್ಷಕಿ ಉಮಾ ಡಿ.ಗೌಡ, ಸಹಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಜರಿದ್ದರು.