ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಜನವರಿಯಲ್ಲಿ ತಂಪು ತಂಪಾಗಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕರಾವಳಿ ಭಾಗದಲ್ಲಿ ಫೆಬ್ರವರಿ ಅಂತ್ಯದಿಂದಲೇ ಸೆಖೆ ಜೋರಾಗಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಉರಿ ಹೆಚ್ಚಿದ್ದು, ಮಧ್ಯಾಹ್ನ ವೇಳೆ ಹೊರಗೆ ಓಡಾಡಲು ಜನ ಹೆದರುವಂತಾಗಿದೆ.
ಇದೀಗ ರಾತ್ರಿ ವೇಳೆ ಸೆಖೆ ಹೆಚ್ಚಿದ್ದು ಫ್ಯಾನ್ ಗಾಳಿಯೂ ಬಿಸಿಯಾಗುತ್ತಿದೆ. ಉರಿ ಸೆಖೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಧ್ಯಾಹ್ನದ ವೇಳೆ ಜನರ ಪಾಲ್ಗೊಳ್ಳುವಿಕೆ ಕಡಿಮೆ.
ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ, ಪಶ್ಚಿಮಘಟ್ಟ, ನದಿ ಮೂಲಕ್ಕೆ ಹಾನಿ, ಪ್ರಾಕೃತಿಕ ಸಂಪತ್ತು ಲೂಟಿ, ಬೃಹತ್ ಕೈಗಾರಿಕೆಗಳ ದಾಳಿ ತಾಪಮಾನ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕುಗಳಲ್ಲಿ ಕೂಡ ಶುಕ್ರವಾರ ವಿಪರೀತ ಸೆಕೆ ಜನರನ್ನು ಬಾಧಿಸಿದೆ. ಕಳೆದ ವಾರ ಮಂಗಳೂರಿನಲ್ಲಿ 38 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಕಂಡಿದೆ. ಕಳೆದ ವರ್ಷ ಮಾರ್ಚ್ ತಿಂಗಳ ಮೊದಲ ದಿನವೇ ದಿನದ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಮಂಗಳೂರಿನಲ್ಲಿ 35.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. 2017ರ ಫೆಬ್ರವರಿಯಲ್ಲಿ 38.7 ಡಿಗ್ರಿ ಸೆಲ್ಸಿಯಸ್, 2016 ಫೆಬ್ರವರಿಯಲ್ಲಿ 38.4 ಡಿಗ್ರಿ ಸೆಲ್ಸಿಯಸ್ ಕಂಡುಬಂದಿತ್ತು.
ಕರಾವಳಿ ಜಿಲ್ಲೆಗಳಲ್ಲಿ ಜನವರಿ ಅಂತ್ಯದವರೆಗೂ ಅಷ್ಟೇನು ಉಷ್ಣಾಂಶ ಏರಿಕೆಯಾಗಿರಲಿಲ್ಲ. ಫೆಬ್ರವರಿಯಲ್ಲಿ ತಾಪಮಾನ ಏರಿಕೆಯಾಗಲಾರಂಭಿಸಿತು. ಕಳೆದ ಶುಕ್ರವಾರದಿಂದಿಂದೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಸೆಕೆ ಜನರನ್ನು ಬಾಧಿಸಿದೆ. ಕಲ್ಲಂಗಡಿ, ಸೀಯಾಳಕ್ಕೆ ಭಾರೀ ಬೇಡಿಕೆ ಬರಲಾರಂಭಿಸಿದೆ. ಸೋಡಾ ಶರಬತ್ ತಯಾರಿಸುವವರಿಗೆ ಈಗ ಡಿಮಾಂಡ್. ಆದರೆ ತಣ್ಣೀರು, ಶುದ್ಧವಲ್ಲದ ನೀರನ್ನು ಕುಡಿಯುವವರು ಗಂಟಲು ನೋವು, ನೆಗಡಿಯಂಥದ್ದರಿಂದಲೂ ಬಾಧೆಗೊಳಗಾಗುತ್ತಿದ್ದಾರೆ. ಮದುವೆ, ಮೆಹಂದಿಯಂಥ ಕಾರ್ಯಕ್ರಮಗಳಲ್ಲಿ ಶರಬತ್, ಕಬ್ಬಿನ ಹಾಲುಗಳಿಗೆ ಬೇಡಿಕೆ ಜಾಸ್ತಿಯಾಗುತ್ತಿದೆ. ಹೋಟೆಲ್ ಗಳಲ್ಲೂ ಸಾಮಾನ್ಯ ಊಟಕ್ಕಿಂತ ಜ್ಯೂಸ್ ಗಳಿಗೆ ಬೇಡಿಕೆ ಜಾಸ್ತಿಯಾಗುತ್ತಿದೆ. ಈ ನಡುವೆ ಅಂತರ್ಜಲ ಬತ್ತಿಹೋಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ರಣಬಿಸಿಲು ಕಾಡುವ ಸಾಧ್ಯತೆ ಇದ್ದು, ಶಾಲೆ, ಕಾಲೇಜುಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಷ್ಟೇ ಅಲ್ಲ, ಕಟ್ಟಡ ನಿರ್ಮಾಣ, ತೋಟದ ಕೆಲಸಗಳಲ್ಲಿ ದುಡಿಯುವವರು, ಪೊಲೀಸ್ ಸಿಬ್ಬಂದಿ ಸಹಿತ ಬಿಸಿಲಿನಲ್ಲಿ ಕೆಲಸ ಮಾಡುವವರು ಬಾಧೆಗೆ ಒಳಗಾಗುವ ಸಾಧ್ಯತೆ ಇದೆ.