ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಕೊಟ್ಟರೆ ಅವಕಾಶ, ಮುಟ್ಟುವೆವು ಆಕಾಶ ಎಂಬ ಘೋಷವಾಕ್ಯದೊಂದಿಗೆ ಬಂಟ್ವಾಳದಲ್ಲಿ ಫೆ.23ರಂದು ವಿಶೇಷ ಚೇತನ ಮಕ್ಕಳ ಹಬ್ಬ ನಡೆಯಲಿದೆ.
ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಬೆಳಗ್ಗೆ 9.30ರಿಂದ 4ವರೆಗೆ ಕಾರ್ಯಕ್ರಮ ನಡೆಯುವುದು. ಜಿಲ್ಲಾ ಮಟ್ಟದಲ್ಲೇ ಈ ಕಾರ್ಯಕ್ರಮವನ್ನು ಪ್ರಥಮವಾಗಿ ನಡೆಸುತ್ತಿದ್ದು, ಸರಕಾರದ ಯಾವುದೇ ಅನುದಾನ ಇರುವುದಿಲ್ಲ. ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಪ್ರಧಾನ ಅತಿಥಿಗಳಾಗಿ ವಿಶೇಷ ಚೇತನ ಮಕ್ಕಳು ಭಾಗವಹಿಸುತ್ತಾರೆ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ರಾಧಾಕೃಷ್ಣ ಭಟ್ ತಿಳಿಸಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶೇಷ ಚೇತನ ಚೆಸ್ ಅಂತಾರಾಷ್ಟ್ರೀಯ ಪ್ರತಿಭೆ ಯಶಸ್ವಿನಿ ವಹಿಸಲಿದ್ದು, 7 ಸಾಧಕರನ್ನು ಗೌರವಿಸಲಾಗುವುದು. ಎರಡು ವಿದ್ಯಾರ್ಥಿಗಳಿಂದ ಕವನ ಸಂಕಲನ ಬಿಡುಗಡೆಯಾಗಲಿದೆ ಒಟ್ಟು 27 ಸ್ಟಾಲ್ ಗಳು ಇರಲಿದ್ದು, 800ರಿಂದ 900 ಮಂದಿ ಸೇರುವ ನಿರೀಕ್ಷೆ ಇದೆ ಎಂದರು.
ಸರಕಾರದಿಂದ ಗುರುತಿಸಲ್ಪಟ್ಟ ಸುಮಾರು 500 ಮಂದಿ ವಿಕಲಚೇತನರಿದ್ದು, ಇವರಲ್ಲಿ 87 ಮಂದಿ ಗೃಹಾಧರಿತರಿದ್ದಾರೆ, 37 ಮಂದಿ ಎಂಡೋಸಲ್ಫಾನ್ ನಿಂತ ತೊಂದರೆಗೊಳಗಾದವರು ಎಂದು ಅವರು ವಿವರಿಸಿದರು,
ಪೋಷಕರೊಂದಿಗೆ ಸಂತೋಷದ ಕ್ಷಣಗಳನ್ನು ಅನುಭವಿಸಲು ವಿವಿಧ ಖಾದ್ಯಗಳ ಸ್ಟಾಲ್ ಗಳು, ವಿನೂತನ ರೀತಿಯ ವಿಶಿಷ್ಟ ಉದ್ಘಾಟನಾ ಕಾರ್ಯಕ್ರಮ, ವಿಶೇಷ ಚೇತನ ಮಕ್ಕಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ಮಕ್ಕಳಿಗೆ ಗೌರವಾರ್ಪಣೆ, ವಿಶೇಷ ಚೇತನ ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆ ಇಲ್ಲಿ ದೊರೆಯಲಿದೆ. ಮಕ್ಕಳಿಗೆ ವಿಶಿಷ್ಟ ಆಟದ ಸರಣಿಗಳು, ವಿಶೇಷವಾಗಿ ಸ್ವಾಗತಿಸಲು ವಾದ್ಯವೃಂದ ಹಾಗೂ ಬೊಂಬೆಗಳ ಮೆರುಗು ಇರಲಿದ್ದು, ಮಕ್ಕಳಿಗೆ ಕ್ಲೇ ಮಾಡೆಲಿಂಗ್, ಕ್ರಾಫ್ಟ್ ಗಳು, ವರ್ಣಮಯ ಚಿತ್ರಗಳ ರಚನೆಗೆ ಸೂಕ್ತ ವೇದಿಕೆ ಕಲ್ಪಿಸಲಾಗುವುದು. ಕರಕುಶಲ ವಸ್ತುಗಳ ಪ್ರದರ್ಶನ, ಸಾಧಕರೊಂದಿಗೆ ಸಂವಾದ, ಸ್ಮರಣೀಯ ಆಟಿಕೆಗಳ ಸ್ಟಾಲ್ ಗಳು, ನುರಿತರಿಂದ ಮಾಹಿತಿ, ಜಾದೂ ಪ್ರದರ್ಶನ ಇಲ್ಲಿರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ನಾರಾಯಣ ಗೌಡ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ನೋಣಯ್ಯ, ಬಿಆರ್ ಸಿಯ ನೋಡಲ್ ಅಧಿಕಾರಿ ಸುರೇಖಾ ಯಳವರ ಉಪಸ್ಥಿತರಿದ್ದರು.