ಬಂಟ್ವಾಳ: ದೈವಾರಾಧನೆ ಕುರಿತು ನೀತಿಸಂಹಿತೆ ಕುರಿತಾಗಿ ಚರ್ಚಿಸಿ, ಸಮಾನ ನಿರ್ಧಾರವೊಂದಕ್ಕೆ ಬರಲು ಕಾಸರಗೋಡಿನಿಂದ ಕುಂದಾಪುರದವರೆಗಿನ ಗುತ್ತಿನವರಿಂದ ಹಿಡಿದು ಕಟ್ಟುವವರವರೆಗಿನ ಎಲ್ಲ ದೈವಾರಾಧಕ ಪ್ರಾತಿನಿಧಿಕವಾದ ಸಮಾಲೋಚನಾ ಸಮಾವೇಶ ಬಂಟ್ವಾಳ ತಾಲೂಕಿನ ಏರ್ಯಬೀಡಿನಲ್ಲಿ ಫೆ.24ರಂದು ನಡೆಯಲಿದೆ.
ಈ ವಿಷಯವನ್ನು ಏರ್ಯಬೀಡಿನ ಯಜಮಾನ, ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೇಣೂರು ಅರುವ ಅರಸ ಡಾ. ಪದ್ಮರಾಜ ಅಜಿಲ ಕಾರ್ಯಕ್ರಮ ಉದ್ಘಾಟಿಸುವರು. ಅಭ್ಯಾಗತರಾಗಿ ಮುಗುಳಿ ತಿರುಮಲೇಶ್ವರ ಭಟ್, ಪೀತಾಂಬರ ಹೇರಾಜೆ, ಪ್ರಕಾಶ್ ಕುಡ್ಕುಳಿ, ವಾಸುದೇವ ಸಾಲ್ಯಾನ್ ಭಾಗವಹಿಸುವರು. ಪ್ರೊ.ಬಿ.ಎ.ವಿವೇಕ ರೈ ದಿಕ್ಸೂಚಿ ಭಾಷಣ ಮಾಡುವರು. ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಸಮನ್ವಯಕಾರರಾಗಿ ಭಾಗವಹಿಸುವರು. ಬಳಿಕ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಸಮನ್ವಯಕಾರರಾಗಿ ವಿದ್ವಾಂಸ ಕೆ.ಎಲ್.ಕುಂಡಂತಾಯ ಪಾಲ್ಗೊಳ್ಳುವರು. ಜಗನ್ನಾಥ, ದಯಾನಂದ ಕತ್ತಲಸಾರ್, ನೋಣಯ ಬಂಗೇರ ಅಭ್ಯಾಗತರಾಗಿ ಪಾಲ್ಗೊಳ್ಳುವರು. ಸಮಾರೋಪದಲ್ಲಿ ಜಾನಪದ ತಜ್ಞ ಡಾ. ವೈ.ಎನ್.ಶೆಟ್ಟಿ ಮಾತನಾಡುವರು ಎಂದು ಡಾ. ಆಳ್ವ ತಿಳಿಸಿದರು. ದೈವಾರಾಧನೆ ಶ್ರದ್ಧಾಭಕ್ತಿಯ ಆರಾಧನೆಯಾಗಿದ್ದು, ಇತ್ತೀಚಿಗೆ ಪರಂಪರೆಯ ರೀತಿನೀತಿಗಳನ್ನು ಬಿಟ್ಟು, ಅತಿರೇಕಗಳು ನಡೆಯುತ್ತಿರುವುದು ವಿಷಾದನೀಯ. ಹೀಗಾಗಿ ಕೆಲವು ನಿಯಮಗಳನ್ನು ಪಾಲಿಸುವ ಅಗತ್ಯವಿದೆ ಎಂದು ಡಾ. ಏರ್ಯ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಚಂದ್ರಹಾಸ ಶೆಟ್ಟಿ ರಂಗೋಲಿ ಮತ್ತು ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ ಉಪಸ್ಥಿತರಿದ್ದರು