ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಕ್ಷೇತ್ರದ ಮಹಾಗಣಪತಿ ಹಾಗೂ ಶ್ರೀ ಭದ್ರಕಾಳಿ ದೇವರ ದಾರಂದ ಮತ್ತು ಬಾಗಿಲುಗಳಿಗೆ ಕುಲಾಲ ಸಮಾಜದ ವತಿಯಿಂದ ಕೊಡಮಾಡುವ ರಜತ ಹೊದಿಕೆ ಸಮರ್ಪಣ ಸಮಾರಂಭದ ವಾಹನ ಜಾಥವು ಭಾನುವಾರ ಬೆಳಿಗ್ಗೆ ನಡೆಯಿತು.
ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನದ ಬಳಿ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ವಾಹನ ಜಾಥಕ್ಕೆ ಚಾಲನೆ ನೀಡಿದರು. ತೆರೆದ ವಾಹನದ ಮೂಲಕ ರಜತ ಕವಚವನ್ನು ಕೊಂಡೊಯ್ಯಲಾಯಿತು. ಬಿ.ಸಿ.ರೋಡಿನಿಂದ ಕಾಲ್ನಡಿಗೆಯ ಮೂಲಕ ಕೈಕಂಬ ಪೊಳಲಿ ದಾವರದವರೆಗೆ ಸಾಗಿ ಬಳಿಕ ವಾಹನ ಜಾಥದ ಮೂಲಕ ಪೊಳಲಿ ತಲುಪಲಾಯಿತು. ಪೊಳಲಿ ದೇವಸ್ಥಾನದ ಆವರಣದ ಪ್ರವೇಶ ದ್ವಾರದ ಬಳಿಕ ಮತ್ತೆ ಕಾಲ್ನಡಿಗೆಯ ಮೂಲಕ ಕ್ಷೇತ್ರಕ್ಕೆ ತೆರಳಿ ರಜತ ಕವಚ ಸಮರ್ಪಿಸಲಾಯಿತು.
ಕೇರಳದ ಚೆಂಡೆ ವಾದನ, ವಾದ್ಯ ಬ್ಯಾಂಡ್ ನ ಹಿಮ್ಮೇಳ, ಗೊಂಬೆ ಕುಣಿತ, ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ನಡುಬೊಟ್ಟು ಕ್ಷೇತ್ರದ ಧರ್ಮದರ್ಶಿ ರವಿ.ಎನ್, ಕುಲಾಲ ಸಮಾಜ ಬಾಂಧವರ ಸೇವಾ ಸಮಿತಿಯ ಗೌರವಾಧ್ಯಕ್ಷ ಆರ್.ಕೆ. ಪೃಥ್ವಿರಾಜ್, ಅಧ್ಯಕ್ಷ ಸುಂದರ ಬಿ. ಅದ್ಯಪಾಡಿ, ಪ್ರಧಾನ ಕಾರ್ಯದರ್ಶಿ ಪ್ರಮೀಳಾ ಎಂ.ಮಾಣೂರು, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಪ್ರಮುಖರಾದ ನಾರಾಯಣ ಸಿ ಪೆರ್ನೆ, ಶೇಷಪ್ಪ ಮೂಲ್ಯ, ಡಿ.ಎಂ. ಕುಲಾಲ್, ಸುಕುಮಾರ್ ಬಂಟ್ವಾಳ, ಅನಿಲ್‌ದಾಸ್ ಹಾಗೂ ವಿವಿಧ ಕುಲಾಲ ಸಂಘಟನೆಗಳ ಪ್ರಮುಖರು ಹಾಜರಿದ್ದರು. ಪೊಳಲಿ ಕ್ಷೇತ್ರದಲ್ಲಿ ರಜತ ಕವಚ ಸಮರ್ಪಣೆಯ ವೇಳೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶಾಸಕ ರಾಜೇಶ್ ನಾಕ್, ಜೀಣೋದ್ದಾರ ಸಮಿತಿ ಕಾರ್ಯದರ್ಶಿ ಯು.ತಾರಾನಾಥ ಆಳ್ವ, ಕುಲಾಲ ಕುಂಬಾರರ ಯುವ ವೇದಿಕೆಯ ಸಂಸ್ಥಾಪಕ ಡಾ. ಅಣ್ಣಯ್ಯ ಕುಲಾಲ್, ಪ್ರಮುಖರಾದ ಕೃಷ್ಣಕುಮಾರ್ ಪೂಂಜಾ ಮತ್ತಿತರರು ಉಪಸ್ಥಿತರಿದ್ದರು.