ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಚಿತ್ರದ ಲಿಂಕ್ ಇಲ್ಲಿದೆ:
ಬಂಟ್ವಾಳ: ಅಂಗವೈಕಲ್ಯ, ರಕ್ತಸಂಬಂಧದ ಮದುವೆಯ ಸಮಸ್ಯೆಗಳನ್ನು ಬಿಂಬಿಸುವ ತುಮುಲ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ ಬಂಟ್ವಾಳದ ಸ್ವರ್ಣಸೌಧದಲ್ಲಿ ನಡೆಯಿತು. ಸ್ವರ್ಣೋದ್ಯಮಿ ಬಿ.ನಾಗೇಂದ್ರ ಬಾಳಿಗಾ ಕಾರ್ಯಕ್ರಮ ಉದ್ಘಾಟಿಸಿ ತಂಡದ ಸದಸ್ಯರಿಗೆ ಶುಭ ಹಾರೈಸಿದರು. ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಭಾಮಿ ಸುಧಾಕರ ಶೆಣೈ ಮಾತನಾಡಿ, ಸಮಾಜಕ್ಕೆ ಒಂದು ಕಿವಿಮಾತು ಈ ಕಿರುಚಿತ್ರದಿಂದ ಸಿಗಲಿ ಎಂದು ಹಾರೈಸಿದರು. ಡಿವಿಡಿಗಳನ್ನು ಗೌರಿ ಭಟ್ ಬಿಡುಗಡೆ ಗೊಳಿಸಿದರು. ಭಾಸ್ಕರ ರಾವ್ ಬಿ.ಸಿ.ರೋಡ್, ತುಮುಲ ಚಲನಚಿತ್ರ ನಿರ್ದೇಶಕ ಶಕ್ತಿಪ್ರಸಾದ್ ಅಭ್ಯಂಕರ್, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ಚಿತ್ರತಂಡದ ಸದಸ್ಯರಾದ ಸುಬ್ರಹ್ಮಣ್ಯ ಪೈ, ಕೃತಿ ಕಾರಂತ, ವೀಣಾ ಪಂಡಿತ್, ಶ್ರುತಿ ಸುವರ್ಣ, ಬಾಲಸುಬ್ರಹ್ಮಣ್ಯ ನೂಜಿ, ಶಿವಶಂಕರ ಮಯ್ಯ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. ಬಳಿಕ ಚಿತ್ರಪ್ರದರ್ಶನ ನಡೆಯಿತು.
ಚಿತ್ರದ ಹಿಂದೆ: ಅಂಗವೈಕಲ್ಯತೆಗೆ ಕಾರಣಗಳನ್ನು ಹೇಳುತ್ತಾ ಒಂದು ಕಥೆಯನ್ನು ಹೆಣೆದು ಪ್ರಸ್ತುತಪಡಿಸಿರುವ ಸಣ್ಣಚಿತ್ರ ತುಮುಲ. ಹೇಳಿಕೊಳ್ಳಲಾಗದ ಮನಸ್ಸಿನ ತುಮುಲವನ್ನು ಕಥೆಯ ನಾಯಕ ಮತ್ತು ನಾಯಕಿಯರು ಅನುಭವಿಸುವ ಮತ್ತು ಕೌತುಕವನ್ನು ಕೊನೆಯವರೆಗೆ ಉಳಿಸಿಕೊಂಡು ನೋಡುಗರಿಗೆ ಸಣ್ಣ ಸಂದೇಶವನ್ನು ಹೇಳುವ ಕಥಾಹಂದರವನ್ನು ತುಮುಲ ಹೊಂದಿದೆ. ಪಾತ್ರಗಳನ್ನು ಸಾಂಕೇತಿಕ ರೀತಿಯಲ್ಲಿ ಪ್ರಸ್ತುತಪಡಿಸಿ ಮುಖದ ಅಭಿನಯಕ್ಕೇ ಒತ್ತುಕೊಟ್ಟು ಚಿತ್ರೀಕರಿಸಲಾದ ಈ ಕಿರುಚಿತ್ರವು ವಿಶೇಷವಾದ ಚಿತ್ರಕಥೆಯನ್ನು ಹೊಂದಿದೆ. ಕೊಂಕಣಿ ನಾಟಕಗಳಲ್ಲಿ ನಟಿಸಿ ಅನುಭವವಿರುವ ಕಲಾವಿದ ಸುಬ್ರಹ್ಮಣ್ಯ ಪೈ, ಮೊದಲ ಸಲ ಬಣ್ಣಹಚ್ಚಿರುವ ವಂದಿತಾ ಕುಡ್ವ, ಕೃತಿ ಕಾರಂತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇತರೆ ಪಾತ್ರಗಳಲ್ಲಿ ವೀಣಾಪಂಡಿತ್ ಮತ್ತು ಶ್ರುತಿ ಸುವರ್ಣ ಮಿಂಚಿದ್ದಾರೆ. ಭಾವನೆಗಳನ್ನು ಶಬ್ದರೂಪಕ್ಕೆ ಇಳಿಸಿದ್ದು ಪುತ್ತೂರಿನ ಅನುಶ್ರೀ ಪುತ್ತೂರಾಯ. ಈ ಕಿರುಚಿತ್ರಕ್ಕೆ ಒಟ್ಟಂದ ಕೊಟ್ಟದ್ದು ನಕುಲ್ ಅವರ ಸಂಗೀತ ಸಂಯೋಜನೆ. ಮನೋಜ್ಞ ಸಂಗೀತವೇ ಈ ಚಿತ್ರದ ಹೈಲೈಟ್. ಚೆನ್ನೈಯಲ್ಲಿರುವ ನಕುಲ್ ಅಭ್ಯಂಕರ್ ಈಗಾಗಲೇ ತುಳು, ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ಚಿತ್ರಗಳಲ್ಲಿ ಸಂಗೀತ ಸಂಯೋಜಕರಾಗಿ ಮತ್ತು ಗಾಯಕರಾಗಿ ಪ್ರಸಿದ್ಧರು. ಬೆಳಕಿನ ಸಂಯೋಜನೆ ಬಾಲಸುಬ್ರಹ್ಮಣ್ಯಂ ನೂಜಿ ಮತ್ತು ಶಿವಶಂಕರ ಮಯ್ಯ ಇವರದ್ದು. ಮುಖ ಕಾಣದ ಪಾತ್ರಗಳಿಗೆ ಮಾತುಗಳಲ್ಲೇ ಜೀವತುಂಬಿದ್ದು ಸೌಂದರ್ಯ ಮಯ್ಯ ಮತ್ತು ವಾಣಿ ಭಾಸ್ಕರ್. ಚಿತ್ರಕತೆಯನ್ನು ತಿದ್ದಿತೀಡಿ, ಕಲಾವಿದರಿಗೆ ಅಭಿನಯದ ಪಾಠವನ್ನು ಹೇಳಿಕೊಡುತ್ತಾ ಚಿತ್ರನಿರ್ದೇಶನ ಮಾಡಿದ್ದು ಸದಾಶಿವ ನೀನಾಸಂ ಅವರು. ತುಳು ಚಿತ್ರ ಪಡ್ಡಾಯಿಯಲ್ಲಿ ಮತ್ತು ಕನ್ನಡ ಚಿತ್ರ ಕೈರೊಟ್ಟಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ ಹಾಗೂ ನೀನಾಸಂ ಲ್ಲಿ ಅಧ್ಯಾಪನ ಮಾಡಿದ ಅನುಭವ ಸದಾಶಿವ ಅವರಿಗಿದೆ. ನಿರ್ಮಾಣ ಶಶಿಕುಮಾರ್ ಮತ್ತು ಸತೀಶ್ ಬಂಟ್ವಾಳ ಇವರದ್ದು. ಚಿತ್ರೀಕರಣ ಮತ್ತು ಸಂಕಲನ ನಿರ್ವಹಣೆ ಶಕ್ತಿಪ್ರಸಾದ್ ಅಭ್ಯಂಕರ್ ಅವರದ್ದು.